ಬೆಂಗಳೂರು ಫೆ.23- ರಾಜಧಾನಿ ಮಹಾನಗರಿ ಬೆಂಗಳೂರು ನಗರದಲ್ಲಿ ರೌಡಿಗಳ ಚಟುವಟಿಕೆಗಳನ್ನು ಹತ್ತಿಕ್ಕಿ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸಲು ಪೊಲೀಸರು ಸಮರ್ಥವಾಗಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ನಾಗರಾಜ್ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ರೌಡಿಗಳ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಅವರ ಮನೆಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕಾನೂನು ಮೀರಿ ವರ್ತನೆ ಮಾಡಿದರೆ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಬೇಕಾಗುತ್ತದೆ, ಇತ್ತೀಚೆಗೆ ನಮ್ಮ ನಗರ ಪೊಲೀಸ್ ಆಯುಕ್ತರೇ ಏಕಾಏಕಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಗಳಲ್ಲಿದ್ದ ಬಂದೂಕು, ಲಾಂಗ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆಯಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ರೌಡಿಶೀಟರ್ ಗಳ ಚಲನವಲನಗಳ ಬಗ್ಗೆ ಕಣ್ಣಿಡುವಂತೆ ಸೂಚನೆ ಕೊಡಲಾಗಿದೆ.ನಗರದಲ್ಲಿ ನಿರ್ಭಯ ಯೋಜನೆಯಡಿ ನಾವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. 655 ಕೋಟಿ ವೆಚ್ಚದಲ್ಲಿ ನಗರದಾದ್ಯಂತ 7500 ಸಿಸಿ ಕ್ಯಾಮೆರಾಗಳನ್ನು ಅಳವಿಡಿಸಿದ್ದೇವೆ. ಇತ್ತೀಚೆಗೆ ಸಿಟಿ ಕಮಾಂಡ್ ಕಂಟ್ರೋಲ್ ರೂಮ್ ತೆರೆದಿದ್ದೇವೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲೂ ಈ ಕ್ಯಾಮೆರಾಗಳು ದಿನದ 24 ಗಂಟೆಗಳ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದರು.
ನಗರದ ಯಾವುದೇ ಪ್ರದೇಶಗಳಲ್ಲೂ ಸಿಸಿ ಕ್ಯಾಮೆರಾಗಳ ಕಾರ್ಯ ನಿರ್ವಹಣೆ ಕುರಿತಂತೆ ಕಂಟ್ರೋಲ್ ರೂಮ್ ಮೂಲಕವೇ ನಿಯಂತ್ರಣ ಮಾಡುವ ವ್ಯವಸ್ಥೆಯೂ ಇದೆ. ಎಲ್ಲಾದರೂ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಇಲ್ಲಿಂದಲೇ ನಿರ್ದೇಶನ ನೀಡಬಹುದು. ಇದರಿಂದ ಅಪರಾಧ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ವಿದೇಶಿಯೊಬ್ಬರು ತಮ್ಮ ಪರ್ಸ್ ಕಳೆದುಕೊಂಡಿದ್ದರು. ಕೂಡಲೇ ಅವರು ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿರುವ ಕಡೆ ಬಟನ್ ಒತ್ತಿದ ಪರಿಣಾಮ ಪೊಲೀಸರು ಕ್ಷಣಾರ್ಧದಲ್ಲಿ ಅಪರಾಧಿಯನ್ನು ಹಿಡಿಯಲು ಸಾಧ್ಯವಾಯಿತು. ಹೀಗಾಗಿ ಸಾರ್ವಜನಿಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಪರಮೇಶ್ವರ್ ಮನವಿ ಮಾಡಿದರು.
ಇಡೀ ರಾಷ್ಟ್ರದಲ್ಲೇ ಸೈಬರ್ ಕ್ರೈಂ ಠಾಣೆಗಳನ್ನು ಆರಂಭಿಸಿದ ಮೊದಲ ನಗರ ಎನ್ನುವ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ ಪ್ರಾರಂಭದಲ್ಲಿ ಸೈಬರ್ ಅಪರಾಧ ಎಸಗಿದವರ ವಿರುದ್ಧ ರ್ನಿಷ್ಟ ಠಾಣೆಗಳಲ್ಲಿ ಮಾತ್ರ ದೂರು ನೀಡಲು ಅವಕಾಶವಿತ್ತು. ಇದನ್ನು ಬದಲಾಯಿಸಿ ಎಲ್ಲಾ ಠಾಣೆಗಳಲ್ಲೂ ದೂರು ನೀಡುವ ಅವಕಾಶ ಕಲ್ಪಿಸಿದ್ದೇವೆ. ಇದಕ್ಕಾಗಿ ಹೊಯ್ಸಳದವರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.
ಸಾರ್ವಜನಿಕರ ರಕ್ಷಣೆಗಾಗಿ ನಾವು 112 ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಇದಕ್ಕೆ ಸರಿಯಾದ ಮಾಹಿತಿ ಕೊಟ್ಟರೆ ಅಪರಾಧ ಸ್ಥಳಕ್ಕೆ ತಕ್ಷಣವೇ ಪೊಲೀಸರು ಆಗಮಿಸಿ ಅಪರಾಧಿಗಳನ್ನು ಹಿಡಿಯಲು ಅನುಕೂಲವಾಗುತ್ತದೆ ಎಲ್ಲರಿಗೂ ಸುರಕ್ಷತೆ ಒದಗಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಪರಮೇಶ್ವರ್ ಹೇಳಿದರು.