ಬೆಂಗಳೂರು, ಜೂ.30-ಹಿರಿಯ ವಕೀಲ ಬಿ.ಡಿ.ಹಿರೇಮಠ ರವರ ಮೇಲೆ ಸುಳ್ಳು ಆರೋಪ ಮಾಡಿ ‘ಆಟ್ರೋಸಿಟಿಸ್ ಕೇಸ್’ ದಾಖಲಿಸಿರುವುದರ ವಿರುದ್ಧ ನಗರದ ‘ಫ್ರೀಢಂ ಪಾರ್ಕ’ ನಲ್ಲಿ ರಾಜ್ಯ ಮಟ್ಟದ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಸಲಾಯಿತು.
ಹಿರಿಯ ವಕೀಲ ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನೂರಾರು ಮಂದಿ ಪಾಲ್ಗೊಂಡು ಕೂಡಲೇ ಆಟ್ರೋಸಿಟಿಸ್ ಕೇಸ್ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿಧಾನಮಂಡಲದ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳ ಕಲ್ಯಾಣ ಸಮಿತಿ ಸದಸ್ಯ ಶಾಸಕರು, ಕಾನೂನು ದೃಷ್ಟಿಕೋನದಲ್ಲಿ ಅನುರ್ಜಿತಗೊಂಡಿರುವ ಈ ಮೂರು ಸುತ್ತೋಲೆಗಳಲ್ಲಿನ ಅಂಶಗಳನ್ನೇ ಪುನರುಚ್ಚರಿಸುತ್ತಾ, ಕಾರ್ಯಾಂಗದ ಅಧಿಕಾರಿಗಳು ಕರ್ತವ್ಯದಲ್ಲಿ, ಲೋಪವೆಸಗುವಂತೆ ಮಾಡಿ, ಅವರ ಮೇಲೆ ರಾಜಕೀಯ ಕೆಟ್ಟ ಅಕ್ರಮ ಪ್ರಭಾವವನ್ನು ಬೀರಿರುತ್ತಾರೆ ಎಂದು ಹಿರೇಮಠ ತಿಳಿಸಿದರು.
ಬೇಡಜಂಗಮ’ ರ ಜಾತಿ ಗುಣಲಕ್ಷಣಗಳ ವೈಶಿಷ್ಯಗಳನ್ನು ಊಹಾಪೋಹದ ಕಪೋಲಕಲ್ಪಿತ ಅಭಿಪ್ರಾಯಗಳಿಂದ ಹೆಣೆದು ವ್ಯಾಖ್ಯಾನಿಸಿರುವುದು ಶಾಸಕಾಂಗದ ಹಕ್ಕೂ ಅಲ್ಲ್ಲ ಹಾಗೂ ಅಧಿಕಾರದ ಭಾಗವೂ ಅಲ್ಲ. ಕಾನೂನಿಗೆ ವಿರುದ್ಧವಾಗಿ ವೈಚಾರಿಕ ಅರಾಜಕತೆಯನ್ನು ಸೃಷ್ಟಿ ಮಾಡುವುದು, ಭಾರತ ಸಂವಿಧಾನಕ್ಕೆ ಮತ್ತು ಇತರೆ ಕಾನೂನುಗಳಿಗೆ ಬಗೆದ
ದ್ರೋಹವಾಗಿರುತ್ತದೆ. ವೈಯಕ್ತಿಕ ಮತ್ತು ಲೋಕಸೇವಕ ಸ್ಥಾನದ ದೃಷ್ಟಿಯಿಂದ ಶಾಸಕರ ಈ ನಡುವಳಿಕೆಯು ಸಂವಿಧಾನದ
ಅಂಶಗಳ ಉಲ್ಲಂಘಿಸಿದ ಕರ್ತವ್ಯವಾಗಿರುತ್ತದೆ ಎಂದರು.
ಕಳೆದ ಏ.27 ರಂದು ಸಭೆ ಆರಂಭದ ಪೂರ್ವದಲ್ಲಿ ಪ್ರಯತ್ನಿಸಿದಾಗ, “ಚರ್ಚೆಗೆ ಅವಕಾಶವಿಲ್ಲ ಬಿ.ಡಿ. ಹಿರೇಮಠ ಅವರನ್ನು ಹೊರಗೆ ಕಳುಹಿಸಿ” ಎಂದು ಕೆಲವರು ಏರುದನಿಯಲ್ಲಿ ಕೂಗಿ ಅಲ್ಲದೇ ಅತ್ಯಂತ ಅವಮಾನಕರವಾಗಿ ವರ್ತಿಸಿದ್ದ ಮೇರೆಗೆ, ಸಭೆಯ ಹೊರಾಂಗಣದಲ್ಲಿ ಶಾಂತಿಯುತವಾಗಿ ಕುಳಿತು ‘ಸತ್ಯಾಗ್ರಹ’ ಮಾಡುತ್ತಿದ್ದ ಒಕ್ಕೂಟದ ರಾಜ್ಯಾಧ್ಯಕ್ಷರ ಬಳಿ ಎಂ.ಪಿ ಕುಮಾರಸ್ವಾಮಿ ಸಮಿತಿಯ ಅದ್ಯಕ್ಷರವರೇ ಬಂದು ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿ, ಸತ್ಯಾಗ್ರಹವನ್ನು ಕೈಬಿಡಲು ವಿನಂತಿಸಿದರು.
ತದನಂತರ ಕಾನೂನುಬಾಹಿರ ಕ್ರಿಯೆಗಳನ್ನು ಸಮಿತಿಯ ಸದ್ಯಸರು ಮುಂದುವರಿಸುತ್ತಾ ಶ್ರೀ ಬಿ.ಡಿ.ಹಿರೇಮಠ ರವರ ಮೇಲೆ ಸುಳ್ಳು ಆರೋಪ ಮಾಡಿ ‘ಆಟ್ರೋಸಿಟಿಸ್ ಕೇಸ್’ ದಾಖಲಿಸಿರುವುದರ ವಿರುದ್ಧ ಹೋರಾಟ ನಡೆಸಲಾಯಿತು ಎಂದರು.