ಬೆಂಗಳೂರು,ಏ.16 – ಜಯನಗರದ (Jayanagar) ಚುನಾವಣಾ ಚೆಕ್‌ಪೋಸ್ಟ್ ಬಳಿ ತಪಾಸಣೆಯಲ್ಲಿ ಕಾರೊಂದರಲ್ಲಿ ಸಿಕ್ಕಿದ ಕೋಟ್ಯಂತರ ರೂಗಳ ಹಣದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಅಧಿಕಾರಿ ಎನ್ ಮಂಜುನಾಥ್ ಕೊಟ್ಟ ದೂರನ್ನು ಆಧರಿಸಿ ಏ.15ರಂದು ಸ್ಕೂಟರ್ ಹಾಗೂ ಕಾರು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಇಬ್ಬರಿಗೂ ನೋಟೀಸ್ ನೀಡಿದ್ದಾರೆ.
ವಶಕ್ಕೆ ಪಡೆದಿರುವ ಕೋಟ್ಯಂತರ ರೂ. ಹಣವನ್ನು ನಗರ ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಅವರು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಕಾರಿನಲ್ಲಿ ಸಿಕ್ಕ ಹಣವನ್ನು ಎಣಿಕೆ ಮಾಡಿದಾಗ 1,34,99,000 ರೂ. ಹಣ ಪತ್ತೆಯಾಗಿದ್ದು, ಜತೆಗೆ ಬಿಬಿಎಂಪಿಗೆ ಸಂಬಂಧಿಸಿದ ಕೆಲ ದಾಖಲೆಗಳು ಸಿಕ್ಕಿವೆ. ಇವೆಲ್ಲವನ್ನೂ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕರಣದ ವರದಿಯನ್ನು ಕೊಟ್ಟಿದ್ದಾರೆ.
ಇನ್ನೂ ಕ್ಲಾಸ್ ಒನ್ ಗುತ್ತಿಗೆದಾರನಿಗೆ ಸೇರಿದ ಹಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವು ಯಾವುದಾದರು ಪಕ್ಷಕ್ಕೆ ಸೇರಿದ್ದಾ? ವೈಯಕ್ತಿಕ ವ್ಯವಹಾರದ್ದ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸೀಜ್ ಮಾಡಿರುವ ಸ್ಕೂಟರ್ ಹಾಗೂ ಕಾರಿನ ಮಾಲೀಕರಾದ ಸೋಮಶೇಖರ್ ಮತ್ತು ಧನಂಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಪ್ಲೈಯಿಂಗ್ ಸ್ಕ್ವಾಡ್ ತಂಡ 3ರ ಟೀಮ್ ಲೀಡರ್ ಆಗಿ ನೇಮಕಗೊಂಡಿರುವ ಮಂಜುನಾಥ್ ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಆ ದೂರಿನನ್ವಯ ಏ.13ರ ಬೆಳಗ್ಗೆ 11:50ರ ಸುಮಾರಿಗೆ ಜಯನಗರ 4ನೇ ಬ್ಲಾಕ್ ಸಮೀಪ ಅಪರಿಚಿತ ವ್ಯಕ್ತಿಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಹೆಚ್ಚಿನ ಪ್ರಮಾಣದ ನಗದನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ನೋಡಲ್ ಅಧಿಕಾರಿ ನಿಖಿತ ಚಿನ್ನಸ್ವಾಮಿ ಅವರು ತೆರಳಿದ್ದರು.
ಬೆಂಜ್ ಕಾರಿನಲ್ಲಿ ಪತ್ತೆ:
ಈ ವೇಳೆ ನೀಲಿ ಬಣ್ಣದ ಆಕ್ಸಸ್ ಗಾಡಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಗ್ ಇಟ್ಟುಕೊಂಡಿದ್ದ. ನೋಡಲ್ ಅಧಿಕಾರಿ ನಿಖಿತ ಅವರು ಆತನ ಬಳಿ ಹೋಗಿ ವಿಚಾರಿಸಲು ಮುಂದಾಗುತ್ತಿದ್ದಂತೆ, ಸ್ಕೂಟರ್ ಹಾಗೂ ಹಣದ ಬ್ಯಾಗ್ ಬಿಟ್ಟು ಪರಾರಿ ಆಗಿದ್ದ. ಅದೇ ರಸ್ತೆಯಲ್ಲಿದ್ದ ಕೆಂಪು ಬಣ್ಣದ ವೋಕ್ಸ್ ವ್ಯಾಗನ್ ಕಾರು ಮತ್ತು ರಿಜಿಸ್ಟೇಷನ್ ನಂಬರ್ ಇಲ್ಲದ ಬಿಳಿ ಬಣ್ಣದ ಬೆಂಜ್ ಕಾರಿನಲ್ಲೂ ಗರಿ ಗರಿ ನೋಟು ಪತ್ತೆಯಾಗಿತ್ತು.
ಐಟಿಗೆ ಹಸ್ತಾಂತರ:
ಮೊದಮೊದಲು ಬ್ಯಾಗ್‌ನಲ್ಲಿ ಏನಿದೆ ತೋರಿಸಿ ಎಂದಾಗ ಮಾವಿನ ಹಣ್ಣಿನ ಬ್ಯಾಗ್ ಎಂದಿದ್ದರು. ಯಾವಾಗ ನೋಡೆಲ್ ಅಧಿಕಾರಿ ನಿಖಿತ ಅವರು ಕಾರು ಪರಿಶೀಲನೆ ಮಾಡಲು ಹೋದಾಗ ಕಾರಲ್ಲಿದ್ದ ಐವರು ಕಾಲ್ಕಿತ್ತಿದ್ದರು. ಒಟ್ಟು 1,34,99,000 ಹಣ ಪತ್ತೆಯಾಗಿದೆ. ಜತೆಗೆ ವೋಕ್ಸ್ ವ್ಯಾಗನ್ ಕಾರಲ್ಲಿ ಬಿಬಿಎಂಪಿ ದಾಖಲಾತಿಗಳು ಹಾಗೂ ರಿಜಿಸ್ಟೇಷನ್ ನಂಬರ್ ಇಲ್ಲದ ಕಾರಲ್ಲಿ ಒಂದು ಮೊಬೈಲ್, ಒಂದು ಕಾರ್ಡ್ ಪೌಚ್ ದೊರೆತಿದೆ. ಇದೆಲ್ಲವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
