ಚಾಮರಾಜನಗರ,ಜೂ.13- ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾಗ ಓರ್ವ ಬಾಲಕ ಪ್ರಾಣ ಕಳೆದುಕೊಂಡಿದ್ದು, ನೀರಿನಲ್ಲಿ ಸಿಲುಕಿದ್ದ ಇತರ 8 ಮಂದಿಯನ್ನು ರಕ್ಷಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳದ ರಾಮ್ ಚರಣ್ (14) ಮೃತ ಬಾಲಕ. ಇಂದು ಟೆಂಪೋ ಟ್ರಾವೆಲರ್ ವಾಹನವೊಂದರಲ್ಲಿ ಹೆಬ್ಬಾಳದ ಕುಟುಂಬವೊಂದು ಶಿವನಸಮುದ್ರದಲ್ಲಿ ವಾರಾಂತ್ಯ ಪ್ರವಾಸಕ್ಕಾಗಿ ಬಂದಿದ್ದು, ಕಾವೇರಿ ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಬೆಳಗ್ಗೆ ಈಜಿಕೊಂಡು ಹೋಗಿದ್ದರು.
ಮಧ್ಯಾಹ್ನ ವಾಪಸ್ ಹಿಂತಿರುಗುವಾಗ ನೀರಿನ ಸೆಳೆತ ಹೆಚ್ಚಾಗಿ ಓರ್ವ ಬಾಲಕ ಕೊಚ್ಚಿ ಹೋಗಿದ್ದು, 8 ಮಂದಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದರು. ಇವರನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಉಳಿದ 8 ಮಂದಿಯನ್ನು ಬೋಟ್ ಹಾಗು ಹಗ್ಗದ ಸಹಾಯದಿಂದ ಈಚೆ ದಡಕ್ಕೆ ಕರೆತಂದಿದ್ದಾರೆ. ಬಾಲಕ ಮೃತಪಟ್ಟ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.