ಜಾರ್ಖಂಡ್,ಫೆ.25- ರಾಮಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೆತ್ತರು ಹರಿಯುತ್ತಿದ್ದು,10 ದಿನಗಳ ಅಂತರದಲ್ಲಿ ಎರಡು ಪಕ್ಷಗಳ ಮುಖಂಡರನ್ನು ಹತ್ಯೆ ಮಾಡಲಾಗಿದೆ.
ನಿನ್ನೆ ರಾತ್ರಿ 8 ಗಂಟೆಗೆ ಕಾಂಗ್ರೆಸ್ ಮುಖಂಡನನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರಾಜಧಾನಿ ರಾಂಚಿಯಿಂದ 50 ಕಿಮೀ ದೂರದಲ್ಲಿರುವ ಸೌಂದ ಪ್ರದೇಶದ ಭುರ್ಕುಂದ- ಪತ್ರಾಟು ರಸ್ತೆಯಲ್ಲಿರುವ ಹಳೆಯ ಪೆಟ್ರೋಲ್ ಪಂಪ್ ಬಳಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಈ ಶೂಟೌಟ್ ನಡೆದಿದೆ.
ಘಟನೆಯಲ್ಲಿ ಕಾಂಗ್ರೆಸ್ ಮುಖಂಡ 35 ವರ್ಷದ ರಾಜ್ ಕಿಶೋರ್ ಬೌರಿ ಅಲಿಯಾಸ್ ಬಿಟ್ಕಾ ಬೌರಿ ಎಂಬಾತನನ್ನು ವಿರೋಧಿಗಳು ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ಪೆಟ್ರೋಲ್ ಪಂಪ್ ಬಳಿ ಕುಳಿತಿದ್ದ ಬೌರಿ ಮೇಲೆ ಏಕಾಏಕಿ ಗುಂಡು ಹಾರಿಸಿದರು. ಬುಲೆಟ್ಗಳು ದೇಹ ಹೊಕ್ಕು ತೀವ್ರ ರಕ್ತಸ್ರಾವವಾಗಿದೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡಿದ್ದ ರಾಜ್ ಕಿಶೋರ್ ಬೌರಿಯನ್ನು ಭುರ್ಕುಂದದ ಸಿಸಿಎಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಹತ್ತೇ ದಿನದ ಅಂತರದಲ್ಲಿ ರಾಜಕೀಯ ದ್ವೇಷಕ್ಕೆ ಇಬ್ಬರು ಹತ್ಯೆಯಾಗಿರುವುದು ಕ್ಷೇತ್ರದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
ರಾಜ್ ಕಿಶೋರ್ ಬೌರಿ ಬಾರ್ಕಗಾಂವ್‌ನ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರ ಬೆಂಬಲಿಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.”ಕಾಂಗ್ರೆಸ್ ಮುಖಂಡನ ಕೊಲೆಯ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಹತ್ಯೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಕಂಡುಹಿಡಿಯಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ” ಎಂದು ಭುರ್ಕುಂದ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಹೇಳಿದ್ದಾರೆ.
ಇದಕ್ಕೂ ಮೊದಲು ಅಂದರೆ ಫೆಬ್ರವರಿ 16 ರಂದು ಅಪರಿಚಿತ ಬಂದೂಕುಧಾರಿಗಳು ಎಜೆಎಸ್‌ಯು ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಘಟನೆ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಮಗಢ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ.
Previous Articleಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಿ ಕಡ್ಡಾಯ -ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ
Next Article JDS ಟಿಕೆಟ್ ಆಕಾಂಕ್ಷಿಯಿಂದಲೇ ದೋಖಾ!