ಬೆಂಗಳೂರು, ಫೆ.21-
‘ಟಿಪ್ಪು ಸುಲ್ತಾನ್ (Tipu Sultan) ರೀತಿಯಲ್ಲಿ ನನ್ನನ್ನು ಹೊಡೆದು ಹಾಕುವಂತೆ ಕರೆ ಕೊಟ್ಟವರಿಗೆ ಧಮ್, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಲಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿಧಾನಸಭೆಯಲ್ಲಿ ಸವಾಲು ಹಾಕಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಇಂತಹ ಮಾತಿಗೆಲ್ಲ ಹೆದರಲ್ಲ. ತಾಕತ್ತು, ಧಮ್ ಇದ್ದರೆ ನನ್ನನ್ನು ಹೊಡೆದು ಹಾಕಿ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ‘ಈ ವಿಚಾರದ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಅದನ್ನು ಅಲ್ಲಿಗೆ ಬಿಟ್ಟು ಈಗ ಬಜೆಟ್ ಬಗ್ಗೆ ಮಾತನಾಡಿ’ ಎಂದರು.
ಇದರಿಂದ ಕೆರಳಿದ ಸಿದ್ದರಾಮಯ್ಯ, ‘ನೀವೊಬ್ಬ ಅಸಮರ್ಥ ಗೃಹ ಸಚಿವ. ಇಲಾಖೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ವ್ಯಕ್ತಿಯಾಗಿ ನೀವು ಒಳ್ಳೆಯವರು, ಆದರೆ ಇಲಾಖೆ ನಡೆಸಲು ಅಸಮರ್ಥರು’ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಇದಕ್ಕೆ ತಿರುಗೇಟು ನೀಡಿದ ಆರಗ ಜ್ಞಾನೇಂದ್ರ, ‘ನಾನು ನಿಮಗಿಂತ ಚೆನ್ನಾಗಿ ಗೃಹ ಇಲಾಖೆ ನಡೆಸಿದ್ದೇನೆ’ ಎಂದು ತಮ್ಮನ್ನು ಸಮರ್ಥಿಸಿಕೊಂಡರು. ಅದಕ್ಕೆ ಸಿದ್ದರಾಮಯ್ಯನವರು, ‘ನೀವು ಸಮರ್ಥರಿದ್ದರೆ ಸಚಿವ ಅಶ್ವತ್ಥ್‌ನಾರಾಯಣ (Ashwathnarayan) ರವರ ಮೇಲೆ ಕೇಸು ಹಾಕಿ. ಧಮ್ ಇದ್ದರೆ ಸಚಿವರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಸವಾಲು ಹಾಕಿದರು.
‘ನೀವು ಏನೇ ಹೇಳಿದರೂ ನನ್ನ ನಿಲುವಿನಲ್ಲಿ, ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ. ಹೊಡೆದು ಹಾಕಿ, ಸಿದ್ದರಾಮಯ್ಯನ್ನ ಮುಗಿಸಿ ಬಿಡಿ ಎಂದು ಹೇಳುವುದು ಆಡು ಭಾಷೆನಾ ಆರಗ ಜ್ಞಾನೇಂದ್ರರವರೇ?’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಮಾತಿಗೆ ಹಲವು Congress ಸದಸ್ಯರು ದನಿಗೂಡಿಸಿದರು. ಆಗ ಸದನದಲ್ಲಿ BJP ಹಾಗೂ Congress ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.
‘ಸಚಿವ ಅಶ್ವತ್ಥ್‌ನಾರಾಯಣ ಮಾತನಾಡಿದ್ದು ಪ್ರಚೋದನೆ ಅಲ್ಲವೇ? ನಿಮ್ಮ ಇಲಾಖೆ ಸತ್ತು ಹೋಗಿದೆ. ಪ್ರಚೋದನಾಕಾರಿ ಭಾಷಣ ಮಾಡಿರುವ ಅಶ್ವತ್ಥ್‌ನಾರಾಯಣರವರ ಮೇಲೆ ಕೇಸು ಹಾಕಬೇಕು. ಆ ಧೈರ್ಯ ನಿಮಗೆ ಇದೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ಭಾವನಾತ್ಮಕ ವಿಚಾರ ಬಿಟ್ಟು ಬಿಡಿ, ಧರ್ಮದ ವಿಚಾರ ಬಿಟ್ಟು ಬಿಡಿ. ಅಬ್ಬಕ್ಕ ವರ್ಸಸ್ ಟಿಪ್ಪು, ಗಾಂಧಿ ವರ್ಸಸ್ ಗೋಡ್ಸೆ ಇದೆಲ್ಲಾ ಬೇಡ. ಇದೆಲ್ಲಾ ಅಪ್ರಸ್ತುತ. ಅಶ್ವತ್ಥ್‌ನಾರಾಯಣ ಅವರು ಹೊಡಿ, ಬಡಿ ಎಂದು ನೀಡಿರುವ ಹೇಳಿಕೆ ಯಾವ ಸಂಸ್ಕೃತಿ? ಹೊಡಿ ಬಡಿ ಎಂದು ಯಾವ ಧರ್ಮವೂ ಕೂಡಾ ಹೇಳಲ್ಲ. ಇದಕ್ಕೆಲ್ಲ ನಾನು ಜಗ್ಗುವವನಲ್ಲ, ಬಗ್ಗುವುದೂ ಇಲ್ಲ. ಈ ರೀತಿ ಮಾತನಾಡಿರುವುದು ಸಚಿವ ಅಶ್ವತ್ಥ್‌ನಾರಾಯಣರವರ ಬೌದ್ಧಿಕ ದಿವಾಳಿತನ. ಸೋಲುವ ಭಯ, ಹತಾಶೆಯಿಂದ ಈ ರೀತಿ ಮಾತನಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.