ಬೆಂಗಳೂರು, ಮಾ.6- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಕಾಫಿ,ತಿಂಡಿಗಾಗಿ ಬರೋಬ್ಬರಿ ಇನ್ನೂರು ಕೋಟಿ ರೂಪಾಯಿ ವೆಚ್ಚ ಮಾಡಿದ್ದರಾ..
ಹೌದು ಎನ್ನುತ್ತವೆ ಸರ್ಕಾರದ ದಾಖಲೆಗಳು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುವ ಗಣ್ಯರ ಉಪಚಾರದ ಹೆಸರಿನಲ್ಲಿ 200,62,93,027 (ಇನ್ನೂರು ಕೋಟಿ ಅರವತ್ತೆರಡು ಲಕ್ಷದ ತೊಂಬತ್ತಮೂರು ಸಾವಿರದ ಇಪ್ಪತ್ತೇಳು) ರೂ.ಖರ್ಚು ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಮಹೇಶ್ ಮತ್ತು ಎನ್.ಆರ್.ರಮೇಶ್ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ
ಕಾಫೀ, ತಿಂಡಿ, ಬಿಸ್ಕೆಟ್‍ಗಳ ಹೆಸರಿನಲ್ಲೂ 200 ಕೋಟಿ ರೂ.ಗಳ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದ ಅವರು ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿ ತನಿಖೆಗೆ ವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ರಾಜ್ಯ ಅತಿಥಿ ಗೃಹಗಳ ವಿಭಾಗದ ಅಕಾರಿಗಳು ನೀಡಿರುವ ಅಧಿಕೃತ ದಾಖಲೆಗಳ ಪ್ರಕಾರ
2013-14 ರಲ್ಲಿ 36,03,03,078 ರೂಪಾಯಿ
2014-15 ರಲ್ಲಿ 38,26,68,575 ರೂಪಾಯಿ
2015-16 ರಲ್ಲಿ 36,66,19,743 ರೂಪಾಯಿ
2016-17 ರಲ್ಲಿ 44,73,92,077 ರೂಪಾಯಿ
2017-18 ರಲ್ಲಿಬ44,93,09,554 ರೂಪಾಯಿ ಸೇರಿ
ಒಟ್ಟು : 200,62,93,027 ರೂಪಾಯಿ ವೆಚ್ಚ ಮಾಡಲಾಗಿದೆ.
ಐದು ವರ್ಷದ 1,825 ದಿನಗಳಲ್ಲಿ ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರೀ ರಜಾ ದಿನಗಳು ಪ್ರತೀ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಒಟ್ಟು 410 ದಿನಗಳು ಸರ್ಕಾರೀ ರಜಾ ದಿನಗಳಾಗಿವೆ
ಆದರೂ, ಸಿದ್ಧರಾಮಯ್ಯ ನವರ ಅವಧಿಯಲ್ಲಿ ಮುಖ್ಯ ಮಂತ್ರಿಗಳ ಕಚೇರಿಯು ಒಂದು ದಿನವೂ ರಜೆಯಿಲ್ಲದೆ ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲಾ ಸರ್ಕಾರೀ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆಯೆಂದು ಭಾವಿಸಿದರೂ ಸಹ 05 ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಅಂದಿನ ಸಿದ್ಧರಾಮಯ್ಯನವರ ಅಧಿಕೃತ ಕಚೆರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ – ತಿಂಡಿಗೆಂದು ಪ್ರತೀ ದಿನವೊಂದಕ್ಕೆ ಹತ್ತು ಲಕ್ಷದ ತೊಂಬತ್ತೊಂಬತ್ತು ಸಾವಿರದ ಮುನ್ನೂರಾ ಮೂವತ್ತೊಂಬತ್ತು ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಮಹೇಶ್ ವಿವರಿಸಿದರು.
ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ ಅತಿಥಿ ಉಪಚಾರದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ನಡೆದಿದೆ ಎಂದು ದೂರಿದರು.
ಹಾಸಿಗೆ – ದಿಂಬು, ಇಂದಿರಾ ಕ್ಯಾಂಟೀನ್ ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು ಎಲ್‍ಇಡಿ ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಿನಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯಗಳಿಗೆ ಕಾಫೀ – ತಿಂಡಿ – ಬಿಸ್ಕೇಟ್ ಪೂರೈಕೆ ಹೆಸರಿನಲ್ಲೂ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದನ್ನು ನೋಡಿದರೆ, ಇಂತಹ ಬೃಹತ್ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ದೂರಿದರು.
ಹೀಗಾಗಿ ಇಡಿ ಪ್ರಕರಣದ ತನಿಖೆಯನ್ನು ಸಿಬಿಐ ಇಲ್ಲವೇ ಸಿಐಡಿಗೆ ವಹಿಸುವಂತೆ ಆಗ್ರಹಿಸಿದರು.