ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ವೈಮಸಸ್ಸು ಬಗೆಹರಿಸಲಾಗದ ಬಿಕ್ಕಟ್ಟಾಗಿ ಪರಿಣಮಿಸಿದೆ.
ಜಾತ್ಯಾತೀತ ಜನತಾದಳದ ಭದ್ರ ಕೋಟೆಯನ್ನು ಈ ಬಾರಿ ಬೇಧಿಸಬೇಕೆಂದು ಪಣ ತೊಟ್ಟು ತಂತ್ರಗಾರಿಕೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲಾ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ನಡೆಸುತ್ತಿರುವ ಪ್ರಯತ್ನ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ.
ಜಿಲ್ಲೆಯಲ್ಲಿ ಪ್ರಭಾವ ಬೀರುವಂತಹ ನಾಯಕತ್ವದ ಕೊರತೆಯಿಂದಾಗಿ ಯಾರ ಮಾತನ್ನು ಯಾರೂ ಕೇಳದಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಪ್ರತಿಯೊಬ್ಬ ನಾಯಕರದ್ದೂ ಒಂದೊಂದು ಬಣ.ಯಾರೂ ಯಾರಿಗೂ ಉತ್ತರದಾಯಿಲ್ಲ ಎಂಬ ಸ್ಥಿತಿ, ಎಲ್ಲರೂ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಇದರಿಂದಾಗಿ ಎಲ್ಲೆಡೆ ಗೊಂದಲವೋ ಗೊಂದಲ
ಈ ಗೊಂದಲ ಸರಿಪಡಿಸಿ, ಭಿನ್ನಮತಕ್ಕೆ ಬೆಣೆ ಹೊಡೆಯಲು ಸತತ ಪ್ರಯತ್ನ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ಕೆಲ ದಿನಗಳ ಹಿಂದೆ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರಮುಖರ ಸಭೆ ನಡೆಸಿ, ಕೆಲವು ಸಲಹೆ ಸೂತ್ರ ನೀಡಿ ಎಲ್ಲರಿಗೂ ಪಾಲಿಸುವಂತೆ ಹೇಳಿದ್ದರು.ಇದರಿಂದ ಬಿಕ್ಕಟ್ಟು ಬಗೆಹರಿಯಬಹುದೆಂದುಕೊಂಡಿದ್ದರು.ಆದರೆ,ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಮತ್ತೆ ಸಂಧಾನದ ಅಖಾಡಕ್ಕೆ ಧುಮುಕಿದ್ದಾರೆ.
ಅಲ್ಲಿನ ಬಿಕ್ಕಟ್ಟು ಹೇಗಿದೆಯೆಂದರೆ, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೋರಿ 15 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಟಿಕೆಟ್ ಹಂಚಿಕೆ ಮಾಡುವ ಜವಾಬ್ದಾರಿ ವರಿಷ್ಠರ ಮೇಲಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಕಳೆದ ಬಾರಿ ಸ್ಪರ್ಧಿಸಿದ ಗಣಿಗ ರವಿ ಈಗಾಗಲೇ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಮಾಡುತ್ತಿದ್ದು,ಸಭೆ, ಸಮಾರಂಭಗಳಲ್ಲಿ ನಿರತರಾಗಿದ್ದಾರೆ. ಕಳೆದ ಬಾರಿ ಸೋತಿರುವ ತಮಗೆ ಮತದಾರರು ಅನುಕಂಪ ತೋರಲಿದ್ದಾರೆ ಎಂದು ಭಾವಿಸಿ ಕ್ಷೇತ್ರಾದ್ಯಂತ ವಾಲಿಬಾಲ್, ಕ್ರಿಕೆಟ್ ಟೂರ್ನಮೆಂಟ್,ದೇವರ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮ ಸಂಘಟನೆಯಲ್ಲಿ ತೊಡಗಿದ್ದು ತಾವೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ.ಮತ್ತೊಂದೆಡೆ ಡಾ.ಮಹೇಶ್ ಕೂಡಾ ನಾನೇ ಅಭ್ಯರ್ಥಿ ಪಕ್ಷದ ಅಧ್ಯಕ್ಷ ಶಿವಕುಮಾರ್ ಅವರ ಆಶೀರ್ವಾದ ತಮ್ಮ ಮೇಲಿದೆ ಎನ್ನುತ್ತಿದ್ದಾರೆ.
ಇಂತಹ ಗೊಂದಲದ ನಡುವೆ ಇದೀಗ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಪ್ರವೇಶವಾಗಿದೆ. ಇವರು ಪ್ರತಿನಿಧಿಸುವ ನಾಗಮಂಗಲ ಕ್ಷೇತ್ರದಲ್ಲಿ ಪರಿಸ್ಥಿತಿ ಅಷ್ಟು ಅನುಕೂಲಕರವಾಗಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೀಗ ಚಲುವರಾಯಸ್ವಾಮಿ ಮಂಡ್ಯ ಕ್ಷೇತ್ರದತ್ತ ಒಲವು ವ್ಯಕ್ತಪಡಿಸಿದ್ದಾರೆ.
ನಾಗಮಂಗಲಕ್ಕೆ ಬದಲಾಗಿ ತಮಗೆ ಮಂಡ್ಯದಲ್ಲಿ ಅವಕಾಶ ಕೊಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದು ಆಕಾಂಕ್ಷೆಗಳ ನಿದ್ದೆಗೆಡಿಸಿದೆ.
ಇದರ ನಡುವೆ ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಕೆ.ಆರ್.ಪೇಟೆಯಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ನಾರಾಯಣ ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೇ ಅದು ತಮಗೆ ಅನುಕೂಲ ಎಂದು ಕೆಪಿಸಿಸಿ ಭಾವಿಸಿದೆ.ಆದರೆ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಅವರು ಇಲ್ಲಿಬ3 ಬಾರಿ ಸೋತಿದ್ದಾರೆ.ಈ ಸೋಲಿನ ಅನುಕಂಪ ಈ ಬಾರಿ ತಮ್ಮ ಕೈಹಿಡಿಯಲಿದೆ ಎನ್ನುತ್ತೊರುವ ಅವರು ಟಿಕೆಟ್ ಕೊಡದೆ ಹೋದರೆ ಬಂಡಾಯ ಸಾರುವ ಬೆದರಿಕೆ ಹಾಕಿದ್ದಾರೆ.
ಮಳವಳ್ಳಿ ,ಶ್ರೀರಂಗಪಟ್ಟಣ ಹೊರತು ಪಡಿಸಿ ಎಲ್ಲಾ ಕ್ಷೇತ್ರಗಳಲ್ಲೂ ಇಂತಹದೆ ವಾತಾವರಣವಿದ್ದು ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಸೋಮವಾರ ರಾತ್ರಿ ನಡೆದ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಸಂಸದ ಡಿ.ಕೆ. ಸುರೇಶ್ , ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಹೊನ್ನಲಗೆರೆ ರಾಮಕೃಷ್ಣ, ಮದ್ದೂರಿನ ಕಾಂಗ್ರೆಸ್ ಮುಖಂಡರಾದ ಎಸ್. ಗುರುಚರಣ್ ಮತ್ತು ಉದಯ್ ಅವರ ಜತೆ ಸಮಾಲೋಚನೆ ನಡೆಸಿದರು.
ಈ ವೇಳೆ ಹಲವಾರು ವಿಷಯ ಚರ್ಚಿಸಿ ರಾಜಿ ಸೂತ್ರ ಮಂಡಿಸಿದ ಶಿವಕುಮಾರ್ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಎಲ್ಲಾ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಅವರ ಗೆಲುವಿಗೆ ಸಹಕಾರ ನೀಡಬೇಕು’ ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಸಾಧುವಾಗಲಿದೆ ಎಂಬುದನ್ನು ಕಾದು ನೋಡಬೇಕು.