ಬೆಂಗಳೂರು – ರಾಜ್ಯದಲ್ಲಿ ಜನರ ತಲಾ ಆದಾಯ ಕೆಲವೇ ಸಾವಿರ ರೂಪಾಯಿಗಳು ಮಾತ್ರ.ಈ ತಲಾ ಆದಾಯವನ್ನು ಲೆಕ್ಕಾಚಾರ ಹಾಕುವುದು ಹೇಗೆಂದರೆ ನಿರ್ಧಿಷ್ಟ ವರ್ಷದಲ್ಲಿ ಆಯ ಜಿಲ್ಲೆಯು ಪ್ರತಿ ವ್ಯಕ್ತಿ ಗಳಿಸಿದ ಸರಾಸರಿ ಆದಾಯವನ್ನು ಅಳೆಯಲಾಗುತ್ತದೆ. ಆ ಪ್ರದೇಶದ ಒಟ್ಟು ಆದಾಯವನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ಇದನ್ನು ಲೆಕ್ಕ ಹಾಕಲಾಗುತ್ತದೆ. ಜನರ ಜೀವನ ಮಟ್ಟವನ್ನು ಅಳೆಯಲು ತಲಾ ಆದಾಯ ಲೆಕ್ಕ ಹಾಕಲಾಗುತ್ತದೆ.
ಈ ಲೆಕ್ಕಾಚಾರದ ಪ್ರಕಾರ ರಾಜ್ಯದ 30 ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ(Bengaluru City) 5,41,638 ಹೊಂದಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ 71,771 ಹೊಂದಿ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಜನರ ತಲಾ ಆದಾಯ ಬರೋಬ್ಬರಿ 2,97,524 ಪಡೆದು ಮೂರನೇ ಸ್ಥಾನದಲ್ಲಿದೆ.
ನಂತರದಲ್ಲಿ ಇತರೆ ಜಿಲ್ಲೆಗಳಿವೆ.ಯಾಕೆ ಈ ವಿಷಯ ಈಗ ಹೇಳ್ತಾ ಇದೀವಿ ಅಂದರೆ, ಚನ್ನಗಿರಿ ಕ್ಷೇತ್ರದಲ್ಲಿ ಯಾವುದೇ ಸಾಮಾನ್ಯರ ಮನೆಯಲ್ಲಿ ಹುಡುಕಿದರೂ ನಾಲ್ಕು ಕೋಟಿ ರೂಪಾಯಿ ಸಿಗಲಿದೆಯಂತೆ, ಯಾಕೆಂದರೆ ಇಲ್ಲಿರುವರೆಲ್ಲಾ ಅಡಿಕೆ ಕೃಷಿ ಮಾಡುತ್ತಾರೆ ಹೀಗಾಗಿ ಇಷ್ಟು ಹಣ ಇದ್ದೇ ಇರುತ್ತೆ.ಹೀಗಂತಾ ಹೇಳಿದ್ದು ಬೇರಾರೂ ಅಲ್ಲ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ.
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನ ಗುತ್ತಿಗೆ ಕಾರ್ಯಾದೇಶ ನೀಡಲು ಲಂಚ ಪಡೆಯುವ ವೇಳೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮಾಡಾಳು ವಿರೂಪಾಕ್ಷಪ್ಪ ಅವರನ್ನು ಆರೋಪಿ ನಂಬರ್ ಒಂದು ಎಂದು ಹೆಸರಿಸಿದ್ದಾರೆ. ಹೀಗಾಗಿ ಬಂಧನ ಭೀತಿಯಲ್ಲಿದ್ದ ಮಾಡಾಳು ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಪಡೆದು ತಮ್ಮ ಊರಿನಲ್ಲಿ ಪ್ರತ್ಯಕ್ಷವಾದರು.
ಇವರಿಗೆ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಗ್ರಾಮದಲ್ಲಿ ರೋಡ್ ಶೋ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಜಯಘೋಷ ಮುಗಿಲು ಮುಟ್ಟಿತ್ತು.
ಕಾರ್ಯಕರ್ತರ ಅದ್ದೂರಿ ಸ್ವಾಗತದಿಂದ ಪುಳಕಿತರಾದ ಶಾಸಕ ಮಾಡಾಳು ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಗಿರಿ ಅಡಿಕೆ ನಾಡು ಅಂತಾರೆ. ಇಲ್ಲಿ ಅಡಿಕೆ ತೋಟ ಇರುವ ಯಾವುದೇ ಮನೆಯವರ ಬಳಿಯೂ 5-6 ಕೋಟಿ ರೂ. ಇದ್ದೇ ಇರುತ್ತೆ. ನಮ್ಮ ಬಳಿ 125 ಎಕರೆ ಅಡಿಕೆ ತೋಟ ಇದೆ. 2 ಕ್ರಶರ್‌ಗಳಿವೆ, ಅಡಿಕೆ ಮಂಡಿ ಇದೆ. ಇನ್ನೂ ಅನೇಕ ವ್ಯವಹಾರಗಳಿವೆ. ನನ್ನ ಮಗ ಪ್ರಶಾಂತ್ ಬಳಿ ಸಿಕ್ಕಿರೋದು ನಮ್ಮ ಕುಟುಂಬಕ್ಕೆ ಸೇರಿದ ಹಣವೇ ಹೊರತು, ಲಂಚದ ಹಣವಲ್ಲ. ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣವನ್ನು ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಹೇಳಿದರು.
ನನ್ನ ಮಗ ಪ್ರಶಾಂತ್ ಸುಮ್ಮನೇ ಕೂತಿದ್ದ. ಯಾರೋ ಇಬ್ಬರು ಬಂದು ದುಡ್ಡು ಕೊಟ್ಟು ಹೋದ್ರು, ನಂತರ ಲೋಕಾಯುಕ್ತದವರು ಬಂದು ಹಣದ ಮೇಲೆ ಕೈ ಹಿಡಿಸಿ ಸೀಜ್ ಮಾಡಿಕೊಂಡು ಹೋದ್ರು. ಆ ಹಣವನ್ನ ನಮ್ಮ ಪಾನ್ ಮಸಾಲ ಕಂಪನಿಗಾಗಿ ಕೊಡಲು ಬಂದಿರಬಹುದು ಎಂದು ತಿಳಿಸಿದರು.
ನಾನು ಸರಳ, ಸಜ್ಜನ ರಾಜಕಾರಣಿ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನ ಕ್ಷೇತ್ರದ ಜನರೇ ಹೇಳ್ತಾರೆ. ನ್ಯಾಯಾಲಯದಿಂದ ನಿಷ್ಪಕ್ಷಪಾತ ತೀರ್ಪು ಸಿಗುತ್ತದೆಂದು ನಾನು ಭಾವಿಸುತ್ತೇನೆ ಎಂದರು.
ನನ್ನನ್ನ ಯಾರೂ ಟ್ರ್ಯಾಪ್ ಮಾಡೋಕೆ ಬಂದಿಲ್ಲ. ಆದ್ರೆ ಯಾರೋ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿಸಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಇನ್ನೇನೋ ಮಾಡಿಸಿದ್ದರು, ಇದೀಗ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದು ವಿವರಿಸಿದರು.
ಶಾಸಕರ ಈ ಹೇಳಿಕೆ ಹಾಗೂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ನಡೆ ವ್ಯಾಪಕ ಟೀಕೆಗೆ ಗ್ರಾಮವಾಗಿದೆ.
ಚನ್ನಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಸ್ವಯಂ ಸೇವಾ ಸಂಸ್ಥೆ ಸಮೂಹಶಕ್ತಿ ಇಡೀ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದೆ.
ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದೆ ಜನ ಸಾಮಾನ್ಯರಲ್ಲಿ ರಾಜಕೀಯ ಅರಿವು ಮೂಡಿಸುವ ಜೊತೆಗೆ ಹಲವು ಜನಪರ ಕೆಲಸದಲ್ಲಿ ನಿರತವಾಗಿರುವ ಈ ಸಂಘಟನೆ ಶಾಸಕರನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ ವೈಖರಿ ನಾಚಿಕೆಗೇಡು ಎಂದು ಹೇಳಿದೆ.
ಶಾಸಕ ಮಾಡಾಳು ಯಾವುದೋ ದೊಡ್ಡ ಜನಪರ ಕೆಲಸ ಮಾಡಿ ಬಂಧನದ ಭೀತಿಗೆ ಸಿಲುಕಿರಲಿಲ್ಲ. ಇವರ ಪುತ್ರ ಇವರ ಸಲಹೆಯಂತೆ ಗುತ್ತಿಗೆ ಕಾರ್ಯಾದೇಶ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.ಇಂತಹ ಭ್ರಷ್ಟಾಚಾರ ಆರೋಪದ ಶಾಸಕರಿಗೆ ಬಿಜೆಪಿ ಕಾರ್ಯಕರ್ತರು ನೀಡಿದ ಸ್ವಾಗತದಿಂದ ಕ್ಷೇತ್ರದ ಪ್ರಜ್ಞಾವಂತರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ನಿರುದ್ಯೋಗ ಮಾಮೂಲು, ಅತಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕೂಲಿ ಕಾರ್ಮಿಕರಿದ್ದಾರೆ.ಸಾವಿರಾರು ಜನ ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರೆ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಇರುವ ಕೃಷಿಕರು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ.ಅಡಿಕೆ ಬೆಳೆಗಾರರು ಕೂಡ ಸಂಕಷ್ಟದಲ್ಲಿದ್ದಾರೆ.ಆದರೆ ಶಾಸಕ ಮಾಡಾಳು ಕ್ಷೇತ್ರದ ಅಡಿಕೆ ಬೆಳೆಗಾರರ ಮನೆಯಲ್ಲಿ ನಾಲ್ಕೈದು ಕೋಟಿ ರೂಪಾಯಿ ಇರುವುದು ಮಾಮೂಲು ಎನ್ನುತ್ತಾರೆ ಈ ಹೇಳಿಕೆ ಮೂರ್ಖತನದ ಪರಮಾವಧಿ. ಇವರು ಹೇಳುವುದು ಸತ್ಯವಾದರೆ ಕ್ಷೇತ್ರದ ಜನರ ತಲಾ ಆದಾಯ ಎಷ್ಟಿರಬೇಕು ಎಂದು ಪ್ರಶ್ನಿಸಿದೆ.
ಚನ್ನಗಿರಿಯಲ್ಲಿ ಸಾಮಾನ್ಯರ ಮನೇಲೂ ನಾಲ್ಕೈದು ಕೋಟಿ ಇರುತ್ತೆ!
Previous ArticleMandya ಕಾಂಗ್ರೆಸ್ ನಲ್ಲಿ ಧಗಧಗಿಸುತ್ತಿರುವ ಭಿನ್ನಮತ #mandya #congress
Next Article ಯಡಿಯೂರಪ್ಪ ಕಾಯೋ ತಂದೆ! #yediyurappa #bjp