ಬೆಂಗಳೂರು.ಜ,2 – ವಿಧಾನಸಭೆಯ ಪ್ರತಿಪಕ್ಷ ನಾಯಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಬಂಡಾಯ ಸಾರಿದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ವಿ. ಸೋಮಣ್ಣ (Somanna) ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ಮುಂದಾಗಿದೆ.
ಬಿಜೆಪಿ ನಾಯಕತ್ವದ ವಿರುದ್ಧ ಬೇಸರಗೊಂಡು ಸೋಮಣ್ಣ ಅವರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವರದಿಗಳ ಬೆನ್ನೆಲ್ಲೇ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
ಅಷ್ಟೇ ಅಲ್ಲ ಸೋಮಣ್ಣ (Somanna) ಅವರಿಗೆ ಉನ್ನತ ಹುದ್ದೆ ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ತೀರ್ಮಾನಿಸಿದೆ. ಈ ಕುರಿತಂತೆ ತಮ್ಮದೇ ಮೂಲಗಳಿಂದ ಹೈಕಮಾಂಡ್ ವರದಿಯೊಂದನ್ನು ಪಡೆದಿದೆ. ಅದರಲ್ಲಿ
ಸೋಮಣ್ಣ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ರಾಗಿದ್ದಾರೆ ಅವರು ಪಕ್ಷ ತೊರೆದು ಹೋದರೆ ದೊಡ್ಡ ಹಾನಿ ಉಂಟಾಗಲಿದೆ ಎಂದು ವಿವರಿಸಲಾಗಿದೆ. ಅಷ್ಟೇ ಅಲ್ಲ ಅವರು ಕಾಂಗ್ರೆಸ್ ಸೇರಿದರೆ ಬಿಜೆಪಿ ಇನ್ನಷ್ಟು ಹಾನಿಯಾಗಲಿದೆ ಎಂಬುದಾಗಿ ವಿವರಿಸಿ ಹಲವು ಅಂಕಿ ಅಂಶಗಳನ್ನು ನೀಡಲಾಗಿದೆ ಎಂದು ಗೊತ್ತಾಗಿದೆ.
ಈ ವರದಿ ಅವಲೋಕಿಸಿದ ವರಿಷ್ಠರು ಈ ಕುರಿತಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಮಾತುಕತೆ ನಡೆಸಿದೆ.
ಈ ಮಾತುಕತೆ ವೇಳೆ ಯಡಿಯೂರಪ್ಪ ಅವರು ಮಾಜಿ ಸಚಿವ ಸೋಮಣ್ಣ ಅವರು ಪಕ್ಷ ಬಿಟ್ಟರೆ ಕೊಂಚಮಟ್ಟಿಗೆ ಹಿನ್ನಡೆ ಆಗಲಿದೆ. ಅವರು ತಮ್ಮ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ತಾವು ಕೂಡ ಪ್ರಯತ್ನ ನಡೆಸಿದ್ದು ಅದು ಇಲ್ಲಿಯವರೆಗೆ ಫಲಪ್ರದವಾಗಿಲ್ಲ ತಾವು ಅವರೊಂದಿಗೆ ಮಾತುಕತೆ ಮುಂದುವರಿಸುತ್ತಿದ್ದೇನೆ ಎಂದು ವರಿಷ್ಠರಿಗೆ ವಿವರಿಸಿದ ಅವರು ಹೈಕಮಾಂಡ್ ಮಧ್ಯಪ್ರವೇಶಸಿ ಅವರನ್ನು ಸಮಾಧಾನಪಡಿಸಿದರೆ ಉತ್ತಮ. ಇದರಿಂದ ವಿಜಯೇಂದ್ರ ಕೈ ಬಲಪಡಿಸಿದಂತಾಗಲಿದ್ದು,ಗೊಂದಲ ದೂರಾಗಲಿದೆ ಇದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರು ಈ ರೀತಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಸೋಮಣ್ಣ ಅವರಿಗೆ ಸ್ಥಾನಮಾನ ನೀಡುವ ಮೂಲಕ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಕುಳಿತಂತೆ ಚರ್ಚೆ ನಡೆಸಿದ್ದಾರೆ.
ಚರ್ಚೆಯ ವೇಳೆ ವಿಜಯೇಂದ್ರ ಅವರು ಸೋಮಣ್ಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಅವರು ಕ್ಷೇತ್ರ ಬದಲಾಯಿಸಿದ್ದಾರೆ ಇಲ್ಲಿ ಅವರಿಗೆ ಹಿನ್ನಡೆಯಾಗಿದೆ ಅದಕ್ಕೆ ತಾವೇ ಕಾರಣ ಎಂಬುದಾಗಿ ಅವರು ಭಾವಿಸಿದ್ದು ನನ್ನ ವಿರುದ್ಧ ದ್ವೇಷ ಕಾರುತ್ತಿದ್ದಾರೆ ನಾವ್ಯಾರೂ ಅವರ ಸೋಲಿಗೆ ಕಾರಣರಲ್ಲ ಅವರು ಪಕ್ಷದ ಹಿರಿಯನಾಯಕ.ಅವರು ಬಿಜೆಪಿಯಲ್ಲಿ ಮುಂದುವರೆಯುವುದು ಉತ್ತಮ ಎಂದು ತಿಳಿಸಿದರೆಂದು ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ ಈ ವೇಳೆ ಅರುಣ್ ಸಿಂಗ್ ಅವರು ಸೋಮಣ್ಣ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಹೇಗಿರಲಿದೆ ಎಂಬ ಕುರಿತಾಗಿ ವಿಜಯೇಂದ್ರ ಅವರ ಅಭಿಪ್ರಾಯ ಕೇಳಿದ್ದಾರೆ.ಇದಕ್ಕೆ ತಮ್ಮದೇ ವಾದ ಮಂಡಿಸಿದ ವಿಜಯೇಂದ್ರ,ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಅವರು ಕಣಕ್ಕಿಳಿಯಲು ತಮ್ಮ ತಕರಾರು ಎನೂ ಇಲ್ಲ ಆದರೆ ಅವರ ವಯಸ್ಸನ್ನು ಪರಿಗಣಿಸಬೇಕು ಹೀಗಾಗಿ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಹೇಳುವುದಕ್ಕಿಂತ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸೂಚಿಸಬಹುದಾಗಿದೆ ಎಂದು ಹೇಳಿದರು ಎಂದು ಉನ್ನತ ಮೂಲಗಳು ತಿಳಿಸಿವೆ. ಇದಾದ ನಂತರ ಅರುಣ್ ಸಿಂಗ್ ಅವರು ಸೋಮಣ್ಣ ಅವರು ರಾಜ್ಯ ಬಿಜೆಪಿಯಲ್ಲಿ ಮುಂದುವರೆಯುವುದರಿಂದ ಆಗುವ ಅನುಕೂಲ ಅನಾನುಕೂಲ ಮತ್ತು ಪಕ್ಷ ತೊರೆಯುವುದರಿಂದ ಉಂಟಾಗುವ ಪರಿಣಾಮಗಳ ಕುರಿತಾಗಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಅವರಿಗೆ ವರದಿ ನೀಡಿದ್ದಾರೆ.
ಈ ವರದಿಯನ್ನು ಪರಿಶೀಲನೆ ಮಾಡಿಸ ನಂತರ ನಡ್ದಾ ಅವರು ಸೋಮಣ್ಣ ಅವರನ್ನು ಸಂಪರ್ಕಿಸಿ ತಮ್ಮ ಎಲ್ಲಾ ಅಹವಾಲು ಕೇಳಲು ಪಕ್ಷದ ಹೈಕಮಾಂಡ್ ಸಿದ್ಧವಿದೆ ಯಾವುದೇ ಕಾರಣಕ್ಕೂ ತಾವು ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ಮಾಡಿದರು ಎಂದು ಗೊತ್ತಾಗಿದೆ
ನಿಮ್ಮ ಸಮಸ್ಯೆಗಳ ಕುರಿತಂತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು ಎಲ್ಲವೂ ಬಗೆಹರಿಯಲಿದೆ ತಮ್ಮನ್ನು ಪ ಪಕ್ಷ ಎಂದಿಗೂ ಕಡೆಗಣಿಸಿಲ್ಲ.ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬಾರದು ನಿಮ್ಮೊಂದಿಗೆ ತಾವು ಮುಕ್ತವಾಗಿ ಮಾತನಾಡಲು ಸಿದ್ದರಿದ್ದು,ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಇದನ್ನು ನಯವಾಗಿ ನಿರಾಕರಿಸಿದ ಸೋಮಣ್ಣ ಪಕ್ಷ ಹೇಳಿದಂತೆ ನಡೆದುಕೊಂಡ ತಮಗೆ ದೊಡ್ಡ ಪ್ರಮಾಣದ ಹಿನ್ನಡೆ ಉಂಟಾಗಿದೆ.ಅದನ್ನು ಸರಿ ಪಡಿಸುವ ಯಾವುದೇ ಪ್ರಯತ್ನವನ್ನು ನಾಯಕತ್ವ ಮಾಡಿಲ್ಲ.ಈಗಲೂ ಮಾತುಕತೆ, ಸಂಧಾನ ಎಂಬ ವಿಷಯದಲ್ಲಿ ಕಾಲಹರಣ ತಮಗಿಷ್ಟವಿಲ್ಲ ಎಂದು ನಿಷ್ಠೂರವಾಗಿ ಹೇಳಿದರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಇದಾದ ನಂತರ ಅವರನ್ನು ಸಮಾಧಾನ ಪಡಿಸಿದ ನಡ್ಡಾ ಅವರು ತಮಗೆ ಪಕ್ಷದಲ್ಲಿ ಸೂಕ್ತ ಹುದ್ದೆಯ ಜೊತೆಗೆ ರಾಜ್ಯಸಭೆಯ ಸದಸ್ಯತ್ವ ನೀಡಲಿದೆ ಹೀಗಾಗಿ ತಾವು ಪಕ್ಷ ತೊರೆಯುವ ನಿರ್ಧಾರ ಕೈ ಬಿಟ್ಟು ಬಿಜೆಪಿಯಲ್ಲಿ ಮುಂದುವರಿಯಬೇಕು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದಿಂದ ಬಿಜೆಪಿ ಸಂಸದರು ಆಯ್ಕೆ ಮಾಡುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇದಾದ ನಂತರ ಸೋಮಣ್ಣ ಅವರು ತಮ್ಮ ನಿಲುವು ಬದಲಾಯಿಸಿದ್ದಾರೆ.ಇದೀಗ ಜನವರಿ 9ರಂದು ದೆಹಲಿಗೆ ತೆರಳುತ್ತಿದ್ದು ಪಕ್ಷದ ಅಧ್ಯಕ್ಷ ನಡ್ಡಾ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಸಂಘಟನಾ ಪ್ರಯಾಣ ಕಾರ್ಯದರ್ಶಿ ಸಂತೋಷ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಅಲ್ಲಿ ಅವರ ರಾಜ್ಯಸಭಾ ಸದಸ್ಯತ್ವದ ಕುರಿತುವಂತೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಗೊತ್ತಾಗಿದೆ.
ALSO READ – Latest Kannada News | Latest News In Kannada