ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹಲವಾರು ಕಾರಣಗಳಿಂದ ದೇಶದ ಗಮನ ಸೆಳೆದಿದೆ.
ಕರಾವಳಿ ಮತ್ತು ಮಲೆನಾಡು ಪ್ರದೇಶದ ಸಂಯೋಜನೆಯ ಈ ಕ್ಷೇತ್ರ ಎರಡು ಭಿನ್ನ ಸಂಸ್ಕೃತಿ,ವಿಚಾರ ಹಾಗೂ ಭೌಗೋಳಿಕ ಲಕ್ಷಣಗಳ ಸಮ್ಮಿಲನವಾಗಿದೆ.
2009ರ ಕ್ಷೇತ್ರ ಪುನರ್ ವಿಂಗಣೆಗೂ ಮೊದಲು ಇದು ಚಿಕ್ಕಮಗಳೂರು ಮತ್ತು ಉಡುಪಿ ಎಂಬ ಎರಡು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದು,ಎರಡೂ ಕೂಡಾ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದವು.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡುವ ಮೂಲಕ ದೇಶದ ಗಮನ ಸೆಳೆದ ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.
ಕಾಫಿನಾಡಿನಲ್ಲಿ ಆರಂಭವಾದ ದತ್ತಪೀಠ ಚಳವಳಿ ಕ್ಷೇತ್ರದ ಚಿತ್ರಣ ಬದಲಾಯಿಸಿತು. ಕಾಂಗ್ರೆಸ್ ಕೈ ನಿಂದ ಜಾರಿದ ಕ್ಷೇತ್ರ ಬಿಜೆಪಿಯ ತೆಕ್ಕೆಗೆ ಸೇರ್ಪಡೆಯಾಯಿತು. ದಿವಂಗತ ಡಿ.ಸಿ.ಶ್ರೀಕಂಠಪ್ಪ ಅವರು ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿತು.
ಅದೇ ರೀತಿಯಲ್ಲಿ ಕರಾವಳಿಯ ಉಡುಪಿ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು.ದಿವಂಗತ ಆಸ್ಕರ್ ಫರ್ನಾಂಡೀಸ್ ಅವರು 1980ರಿಂದ 1998ರವರೆಗೆ ಸತತವಾಗಿ 5 ಬಾರಿ ಇಲ್ಲಿ ಗೆದ್ದು ಬೀಗಿದ್ದರು.
2009ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಭಿನ್ನ ಸಂಸ್ಕೃತಿಯನ್ನು ಹೊಂದಿರುವ 2 ಜಿಲ್ಲೆಗಳು ಲೋಕಸಭಾ ಕಣದಲ್ಲಿ ಒಂದಾಗಿವೆ, ಹೀಗಾಗಿ ಇಲ್ಲಿ ಯಾವುದೇ ಅಭ್ಯರ್ಥಿಯಾದರೂ ಗೆಲ್ಲುವುದೂ ಕಠಿಣವೇ.
ಕಳೆದ 2009ರಿಂದ ಈವರೆಗೆ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ 3 ಬಾರಿ ಬಿಜೆಪಿ ಮತ್ತು 1 ಬಾರಿ ಕಾಂಗ್ರೆಸ್ ಜಯಗಳಿಸಿದೆ.
ಮೂರು ಬಾರಿ ಗೆದ್ದಿರುವ ಅಭ್ಯರ್ಥಿಗಳು ಉಡುಪಿ ಅಥವಾ ಚಿಕ್ಕಮಗಳೂರಿಗೆ ಸೇರಿದವರಲ್ಲ. ನೆರೆಯ ಮಂಗಳೂರು ಕ್ಷೇತ್ರಕ್ಕೆ ಸೇರಿದವರು.ಒಮ್ಮೆ ಮಾತ್ರ ಉಡುಪಿ ಜಿಲ್ಲೆಯವರು ಆಯ್ಕೆಯಾಗಿದ್ದರು. ಈ ಬಾರಿ ಕಣಕ್ಕಿಳಿದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಉಡುಪಿ ಜಿಲ್ಲೆಯವರಾಗಿದ್ದಾರೆ.
2009ರ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾರ್ಯಕರ್ತರ ವಿರೋಧ ಎದುರಿಸಿದ ಡಿ.ವಿ. ಸದಾನಂದ ಗೌಡ ಅವರನ್ನು ಹೈಕಮಾಂಡ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸಿತು. ಇಲ್ಲಿಂದ ಆಯ್ಕೆಯಾದ ಸದಾನಂದ ಗೌಡ ಎರಡನೇ ಬಾರಿಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದು, ಸದಾನಂದ ಗೌಡ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜ್ಯದ ಮುಖ್ಯಮಂತ್ರಿ ಯಾದರು.
ಇದರಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿ ಸುನಿಲ್ ಕುಮಾರ್ ಅವರನ್ನು ಮಣಿಸಿ ಕಾಂಗ್ರೆಸ್ ನ ಜಯಪ್ರಕಾಶ್ ಹೆಗಡೆ ಆಯ್ಕೆಯಾಗಿದ್ದರು.
2014ರಲ್ಲಿ ಚುನಾವಣೆಯಲ್ಲಿ ಸದಾನಂದ ಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವರ್ಗಾವಣೆಯಾದರೆ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನ ಜಯಪ್ರಕಾಶ್ ಹೆಗಡೆ ಅವರ ವಿರುದ್ಧ 1,81,643 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು.
ಮತ್ತೆ 2019ರಲ್ಲಿ ಇಲ್ಲಿ ಶೋಭಾ ಕರಂದ್ಲಾಜೆ ವಿರುದ್ದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಅವರು ಕಣಕ್ಕಿಳಿದರೂ ಬಿಜೆಪಿ ಗೆಲುವನ್ನು ತಪ್ಪಿಸಲಾಗಲಿಲ್ಲ.
ಈಗ ಪ್ರಮೋದ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮೂರನೆ ಅವಧಿಗೆ ಈ ಕ್ಷೇತ್ರದಿಂದ ಆಯ್ಕೆ ಬಯಸಿದ ಶೋಭಾ ಕರಂದ್ಲಾಜೆ ಅವರಿಗೆ ಸ್ಥಳೀಯ ಕಾರ್ಯಕರ್ತರ ಪ್ರತಿರೋಧ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸಿತು. ಸಂಸದರಾಗಿ ಆಯ್ಕೆಯಾದ ನಂತರ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪವನ್ನು ಸುಳ್ಳು ಮಾಡಲು ಶೋಭಾ ಪ್ರಯತ್ನಿಸಿದಷ್ಟೂ ಅವರ ವಿರುದ್ಧದ ಅಲೆ ತೀವ್ರಗೊಳ್ಳುತ್ತಾ ಸಾಗಿತು. ಹೀಗಾಗಿ ಬಿಜೆಪಿ ಹೈಕಮಾಂಡ್ ಶೋಭಾ ಅವರಿಗೆ ಈ ಕ್ಷೇತ್ರದ ಬದಲಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮಾಡಿದೆ.
ಹೀಗಾಗಿ ಕ್ಷೇತ್ರದಿಂದ ಅತ್ಯಂತ ಸಂಭಾವಿತ ರಾಜಕಾರಣಿ ಎಂದೇ ಹೆಸರಾಗಿರುವ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ.
ಮತ್ತೊಂದೆಡೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕೆ ಜಯಪ್ರಕಾಶ್ ಹೆಗಡೆ ಅವರು ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 15,72,958 ಮತದಾರರಿದ್ದಾರೆ. ಇದರಲ್ಲಿ, ಸುಮಾರು 8.12 ಲಕ್ಷ ಮಂದಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭೆ ಕ್ಷೇತ್ರಗಳಿಗೆ ಸೇರಿದರೆ ಉಳಿದಿರುವ ಸುಮಾರು 7.6 ಲಕ್ಷ ಮಂದಿ ಮತದಾರರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ(ಎಸ್ ಸಿ ಮೀಸಲು), ಚಿಕ್ಕಮಗಳೂರು ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ್ದಾರೆ.
ಉಡುಪಿ ಕ್ಷೇತ್ರದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ ಚಿಕ್ಕಮಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಮೇಲ್ನೋಟಕ್ಕೆ ಸಮ ಬಲದ ಹೋರಾಟ ಇರುವಂತೆ ಕಂಡುಬರುತ್ತದೆ ಆದರೆ ಎರಡು ಪಕ್ಷಗಳಿಗೆ ಇಲ್ಲಿ ತಮ್ಮದೇ ಆದ ಬಲವೂ ಇದೆ ದೌರ್ಬಲ್ಯವೂ ಇದೆ ಹೀಗಾಗಿ ಸಮಬಲದ ಹೋರಾಟದಲ್ಲಿ ದೌರ್ಬಲ್ಯವನ್ನು ಮೆಟ್ಟಿ ನಿಂತವರು ಸಂಸದರಾಗಿ ಆಯ್ಕೆಯಾಗುತ್ತಾರೆ.
ಕಣದಲ್ಲಿರುವ ಇಬ್ಬರೂ ಅಭ್ಯರ್ಥಿಗಳು ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದಾರೆ
ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳ ಬಿಲ್ಲವ ಸಮುದಾಯಕ್ಕೆ ಸೇರಿದವರು. ಕೆ.ಜಯಪ್ರಕಾಶ್ ಹೆಗಡೆ ಬಂಟ ಸಮುದಾಯಕ್ಕೆ ಸೇರಿದವರು. ಬಿಲ್ಲವ ಹಾಗೂ ಬಂಟ ಸಮುದಾಯಗಳು ಕರಾವಳಿಯ ಪ್ರಬಲ ಜಾತಿಗಳಾಗಿರುವುದರಿಂದ ಸ್ಪರ್ಧೆಯು ತೀವ್ರ ಕುತೂಹಲ ಕೆರಳಿಸಿದೆ. ಎರಡೂ ಪಕ್ಷಗಳು ಅಳೆದು ತೂಗಿ, ಜಾತಿ ಸಮೀಕರಣ ಮಾಡಿ ಟಿಕೆಟ್ ನೀಡಿವೆ.
ಉಡುಪಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಮೀನುಗಾರರು ಈ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್ ಕೈತಪ್ಪಿರುವುದು ಬಿಜೆಪಿಗೆ ಒಳಪೆಟ್ಟು ಕೊಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಪ್ರಮೋದ್ ಮಧ್ವರಾಜ್ ಬಹಿರಂಗವಾಗಿ ಎಲ್ಲಿಯೂ ಬಂಡಾಯ ಪ್ರದರ್ಶಿಸದಿದ್ದರೂ ಅಸಮಾಧಾನದ ಹೊಗೆಯಂತೂ ಆಡುತ್ತಿದೆ. ಮೀನುಗಾರ ಸಮುದಾಯದ ಬಲ, ವೈಯಕ್ತಿಕ ವರ್ಚಸ್ಸು ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಮೋದ್ ಮಧ್ವರಾಜ್ ನಿರ್ವಹಿಸುವ ಪಾತ್ರ ಇಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳೂ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು, ಪ್ರತ್ಯೇಕ ಅಭಿಮಾನಿಗಳ ಬಳಗ ಹೊಂದಿದ್ದಾರೆ.
ರಾಜಕೀಯವಾಗಿಯೂ ಅನುಭವ ಹೊಂದಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಉಂಟಾಗಿದ್ದ ಬಣ ರಾಜಕಾರಣ ಕೊಂಚಮಟ್ಟಿಗೆ ತಣ್ಣಗಾಗಿರುವಂತೆ ಕಂಡುಬರುತ್ತಿದೆ ಸಂಘ ಪರಿವಾರದ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಹೆಸರನ್ನು ಹೇಳುತ್ತಾ ಮನೆ ಮನೆಗೆ ಪ್ರಚಾರ ನಡೆಸುತ್ತಿರುವುದು ಬಿಜೆಪಿಗೆ ದೊಡ್ಡ ಲಾಭ ತಂದು ಕೊಡುವ ನಿರೀಕ್ಷೆ ಹುಟ್ಟಿಸಿದೆ. ಕುಂದಾಪುರದವರಾದ ಜಯಪ್ರಕಾಶ್ ಹೆಗಡೆ ತಮ್ಮದೇ ಆದ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ ಇದರ ಜೊತೆಗೆ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮತಗಳು ತಮ್ಮ ಕೈ ಹಿಡಿಯಬಹುದು ಎಂಬ ವಿಶ್ವಾಸದಲ್ಲಿದ್ದಾರೆ
ಈ ಇಬ್ಬರು ಅಭ್ಯರ್ಥಿಗಳೂ ಚಿಕ್ಕಮಗಳೂರು ಜಿಲ್ಲೆಗೆ ಸೇರಿದವರಲ್ಲ. ಪ್ರತಿ ಬಾರಿಯೂ ಇದು ಪುನರಾವರ್ತನೆಯಾಗುತ್ತಿದೆ ಆದರೂ ಇಲ್ಲಿನ ಬಿಜೆಪಿ ಮತದಾರರು ಯಾವುದೇ ತಕರಾರು ಇಲ್ಲದೆ ತಮ್ಮ ಅಭ್ಯರ್ಥಿಗೆ ಬೆಂಬಲ ಘೋಷಿಸುತ್ತಿದ್ದಾರೆ ಅದೇ ರೀತಿ ಈ ಬಾರಿಯೂ ಕೂಡ ಚಿಕ್ಕಮಗಳೂರಿನ ಸಾಂಪ್ರದಾಯಿಕ ಬಿಜೆಪಿ ಮತಗಳು ಕೋಟಾ ಶ್ರೀನಿವಾಸ ಪೂಜಾರಿ ಅವರ ಬೆಂಗಾವಲಿಗೆ ನಿಂತಿವೆ, ಇದರ ಜೊತೆಯಲ್ಲಿ ಪ್ರಧಾನಿ ಮೋದಿ ಪರವಾದ ಅಲೆ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಎಡವಟ್ಟುಗಳನ್ನು ಸರಿಪಡಿಸಿಕೊಂಡರೆ ಕೋಟಾ ಅವರಿಗೆ ಹೆಚ್ಚಿನ ಮತಗಳು ಲಭಿಸುವ ಸಾಧ್ಯತೆ ಇದೆ
ಜಯಪ್ರಕಾಶ್ ಹೆಗಡೆ ಈ ಹಿಂದೆ ಈ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದು ಜಿಲ್ಲೆಯ ಜನರಿಗೆ ಪರಿಚಿತರು. ಜಿಲ್ಲೆಯ ಸಮಗ್ರ ಚಿತ್ರಣ ಸಮಸ್ಯೆಗಳ ಅರಿವಿದೆ. ಎಲ್ಲಾ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಆತ್ಮೀಯ ಒಡನಾಟ ಇದೆ. ನಾಲ್ವರು ಶಾಸಕರು ಕಾಂಗ್ರೆಸ್‌ನವರೇ ಇರುವುದು ಹೆಗ್ಡೆ ಅವರಿಗೆ ವರ. ಜಿಲ್ಲೆಯಲ್ಲಿ ಲಿಂಗಾಯತ ಒಕ್ಕಲಿಗ ಪರಿಶಿಷ್ಟ ಜಾತಿ, ಪಂಗಡ ಕುರುಬ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಚಿಕ್ಕಮಗಳೂರು ಭಾಗದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿರುವುದು ಮತ್ತು ಕಾಂಗ್ರೆಸ್ ಗ್ಯಾರಂಟಿಗಳು ಈ ಬಾರಿ ಕೈಹಿಡಿಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಗಿದೆ. ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಸುಧೀರ್‌ಕುಮಾರ್ ಮುರೊಳ್ಳಿ ಅವರು ಪಕ್ಷದ ಅಧ್ಯಕ್ಷ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನಕ್ಕೆ ಮಣಿದು ಜಯಪ್ರಕಾಶ್ ಹೆಗಡೆಯವರ ಪರ ಮತಯಾಚಿಸುತ್ತಿದ್ದಾರೆ.
ಒಟ್ಟಾರೆಯಾಗಿ ಇಡೀ ಕ್ಷೇತ್ರದಲ್ಲಿ ಎರಡು ಪಕ್ಷಗಳ ನಡುವೆ ಸಮಬಲದ ಹೋರಾಟ ಕಂಡು ಬರುತ್ತಿದ್ದು ಯಾರೇ ಗೆದ್ದರೂ ಗೆಲುವಿನ ಅಂತರ ಅತ್ಯಂತ ಕಡಿಮೆ ಇರಲಿದೆ ಎನ್ನುವುದಂತೂ ಸ್ಪಷ್ಟ.