ಬೆಂಗಳೂರು,ಆ.18 – ವಿಧಾನಪರಿಷತ್ ನಲ್ಲಿ ತೆರವಾಗಿರುವ ಮೂವರು ಸದಸ್ಯರ ನಾಮಕರಣ ವಿಚಾರ ಇದೀಗ ಕಾಂಗ್ರೆಸ್ ನಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
ತೆರವಾದ ಮೂರು ಸ್ಥಾನಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರ ಜೊತೆ ಸಮಾಲೋಚನೆ ನಡೆಸಿ, ಮಾಜಿ ಮಂತ್ರಿಗಳಾದ ಉಮಾಶ್ರೀ, ಎಂ.ಆರ್.ಸೀತಾರಾಂ ಮತ್ತು ಜಾರಿ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ಸುಧಾಮ್ ದಾಸ್ ಅವರನ್ನು ಸದಸ್ಯರಾಗಿ ನೇಮಿಸಲು ತೀರ್ಮಾನಿಸಿದರು.
ಈ ಕುರಿತಾದ ಕಡತ ಅನುಮೋದನೆಗಾಗಿ ರಾಜಭವನ ತಲುಪುತ್ತಿದ್ದಂತೆ,ಸರ್ಕಾರದಲ್ಲಿ ಅಪಸ್ವರ ಕೇಳಿಬಂದಿದೆ.
ಅದರಲ್ಲೂ ನಿವೃತ್ತ ಅಧಿಕಾರಿ ಸುಧಾಮ್ ದಾಸ್ ಅವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡುವಂತೆ ಶಿಫಾರಸ್ಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ಧಾರವನ್ನು ವಿರೋಧಿಸಿರುವ ದಲಿತ ಸಮುದಾಯದ ಸಚಿವರು ಈ ಪಟ್ಟಿ ತಡೆ ಹಿಡಿಯಲು ಮುಖ್ಯಮಂತ್ರಿಗೆ ಸೂಚಿಸಲು ಕೋರಿ ಹೈಕಮಾಂಡ್‍ಗೆ ಪತ್ರ ಬರೆದಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್,ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಮತ್ತು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರು ಪತ್ರ ಮುಖೇನ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಸುಧಾಮ್ ದಾಸ್ ಅವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಲು ತಮ್ಮ ಗಮನಕ್ಕೆ ತರದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಏಕಪಕ್ಷೀಯವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ದಲಿತರಿಗೆ ಪ್ರಾತಿನಿಧ್ಯದ ಹೆಸರಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಸುಧಾಮ್ ದಾಸ್ ಅವರು ಅನಿರೀಕ್ಷಿತವಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ. ನಂತರ ಅವರನ್ನು ರಾಜ್ಯ ಮಾಹಿತಿ ಹಕ್ಕು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ.
ಕಳೆದ ಮಾರ್ಚ್ ನಲ್ಲಿ ಈ ಹುದ್ದೆಗೂ ರಾಜೀನಾಮೆ ನೀಡಿದ ಅವರು ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಇದೀಗ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.ಇದು ದಲಿತ ಸಮುದಾಯದ ಹೆಸರಲ್ಲಿ ದಲಿತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇಂತಹ ನಾಮಕರಣ ಸಮಯದಲ್ಲಿ ಸಾಮಾಜಿಕ ನ್ಯಾಯ ಪಾಲನೆಯ ಜೊತೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೂ ಗಮನ ಹರಿಸಬೇಕು ಆದರೆ ಇಲ್ಲಿ ಈ ಯಾವುದೇ ಪ್ರಕ್ರಿಯೆಗಳಿಗೆ ಅವಕಾಶ ಸಿಕ್ಕಿಲ್ಲ.
ಹೀಗಾಗಿ ತಕ್ಷಣವೇ ಈ ನೇಮಕಾತಿ ಪ್ರಸ್ತಾಪ ತಡೆ ಹಿಡಿಯಲು ಸೂಚನೆ ನೀಡಬೇಕೆಂದು ಕೋರಿರುವುದಾಗಿ ಗೊತ್ತಾಗಿದೆ ಪತ್ರ ನಿಜ:
ಈ ನಡುವೆ ಎಲ್ಲಾ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಾವು ಹೈಕಮಾಂಡ್ ಗೆ ಪತ್ರ ಬರೆದಿರುವುದು ನಿಜ.ಅದರೆ ಸುಧಾಮ್ ದಾಸ್ ಆಯ್ಕೆಗೆ ವಿರೋಧಿಸಿಲ್ಲ ಬದಲಿಗೆ ನಿಷ್ಠಾವಂತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸುಧಾಮ್ ದಾಸ್ ಅವರು ಕೇವಲಮೂರು ತಿಂಗಳ ಹಿಂದೆ ಪಕ್ಷಕ್ಕೆ ಬಂದಿದ್ದಾರೆ. ಅವರು ಇನ್ನಷ್ಟು ದಿನ ಪಕ್ಷದ ಕೆಲಸ ಮಾಡಲಿ ನಂತರ ಅವರಿಗೆ ಅವಕಾಶ ಕೊಡಲಿ ಎಂದು ಹೇಳಿದ್ದೇವೆ,ಮೂವತ್ತು ವರ್ಷಗಳಿಗೂ ಅಧಿಕ ಕಾಲದಿಂದ ಪಕ್ಷಕ್ಕೆ ಕೆಲಸ ಮಾಡಿದವರು ಸಾಕಷ್ಟು ಜನ ಇದ್ದಾರೆ ಅವರಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.