ಬೆಂಗಳೂರು.
ರಾಜ್ಯ ಸರ್ಕಾರದ ಮುಖ್ಯ ಸಚೇತಕ ಹಾಗೂ ಆಡಳಿತ ರೂಢ BJP ಶಾಸಕ ಸತೀಶ್ ರೆಡ್ಡಿ (Satish Reddy) ಹತ್ಯೆಗೆ ಸುಪಾರಿ (supari) ನೀಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಬೆಂಗಳೂರು ನಗರದ ಪ್ರಭಾವಿ ಶಾಸಕರ ಹತ್ಯೆಗೆ ಸುಪಾರಿ ನೀಡಿರುವ ಪ್ರಕರಣ ಆತಂಕ ಸೃಷ್ಟಿಸಿದೆ. ರಾಜಕೀಯ ಕಾರಣಕ್ಕಾಗಿ ಈ ಹತ್ಯೆಯ ಸಂಚು ನಡೆದಿದೆ ಎಂಬ ಶಂಕೆಯಿದ್ದು, ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ (Holalkere, Chitradurga) ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಅಲ್ಲದೆ ಶಾಸಕರ ಆಪ್ತ ಸಹಾಯಕ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಲ್ಸನ್ ಗಾರ್ಡನ್ ನಾಗನಿಂದ ಎರಡು ಕೋಟಿಗೆ ಸುಪಾರಿ ಪಡೆದು, ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೊದಲು NCR ದಾಖಲಿಸಿದ್ದ ಬೊಮ್ಮನಹಳ್ಳಿ ಪೊಲೀಸರು, ಕೋರ್ಟ್ ನಿಂದ ಅನುಮತಿ ಪಡೆದು ವಿಲ್ಸನ್ ಗಾರ್ಡನ್ ನಾಗಾ, ಆಕಾಶ್ ಹಾಗೂ ಇತರರ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಬಿಜೆಪಿಯ ಪ್ರಭಾವಿ ಶಾಸಕರಾಗಿದ್ದು, ಕಳೆದ ಹದಿನೈದು ದಿನದಿಂದ ಅಪರಿಚಿತರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಸತೀಶ್ ರೆಡ್ಡಿ ಮನೆ ಹಾಗೂ ಕಛೇರಿ ಬಳಿ ಅಪರಿಚಿತರಿಂದ ಓಡಾಟ ನಡೆಯುತ್ತಿದ್ದು, ಶಾಸಕ ಸತೀಶ್ ರೆಡ್ಡಿ ಆಪ್ತರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.
ಸುಪಾರಿ ಬಗ್ಗೆ ವಿಧಾನಸೌಧದಲ್ಲಿ ಸತೀಶ್ ರೆಡ್ಡಿ ಮಾತನಾಡಿ, ‘ನನಗೆ ಮಂಗಳವಾರ ಸಂಜೆ ಪೊಲೀಸರು ಈ ಬಗ್ಗೆ ತಿಳಿಸಿದರು. ಈಗ ಚುನಾವಣೆ ಇದೆ, ರಾಜಕೀಯ ಕಾರಣಗಳೂ ಇರಬಹುದು. ಈ ವಿವಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಗೆ ತಿಳಿಸಿದ್ದೇನೆ. ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಪಡೆದುಕೊಳ್ಳಲು CM ಸೂಚಿಸಿದರು. ಆದರೆ ನನಗೆ ಭದ್ರತೆ ಬೇಡ ಅಂದಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ನಾನು ಭಯ ಪಡುವುದಿಲ್ಲ ಎಂದು ಹೇಳಿದರು.
ಸುಪಾರಿ ಹಿಂದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ತಾರೆ. ಆರೋಪಿಗಳು ನನ್ನ ಚಲನವಲನಗಳ ಮೇಲೆ ಗಮನ ಇಟ್ಟಿದ್ದರಂತೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಏನೇನು ಮಾಡಿದ್ದಾರೆ ಅಂತ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.