ಬೆಂಗಳೂರು,ಸೆ.18- ನಗರದಲ್ಲಿ ನಡೆದಿದ್ದ 2007ರ ಶಬನಂ ಡೆವಲಪರ್ಸ್ ಸಿಬ್ಬಂದಿ ಕೊಲೆ ಪ್ರಕರಣ ಸಂಬಂಧ ಕುಖ್ಯಾತ ಪಾತಕಿ ರವಿಪೂಜಾರಿ ಸಹಚರ ಸುರೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲು ಮುಂಬೈಗೆ ನಗರದ ಸಿಸಿಬಿ ಅಧಿಕಾರಿಗಳು ತೆರಳಿದ್ದಾರೆ..
ಕಳೆದ ಡಿಸೆಂಬರ್‌ನಲ್ಲಿ ವಿದೇಶದಲ್ಲಿ ನೆಲೆಸಿದ್ದ ಪೂಜಾರಿ ಶಿಷ್ಯ ಸುರೇಶ್ ಪೂಜಾರಿಯನ್ನು ಮುಂಬೈ ಪೊಲೀಸರು ಬಂಧಿಸಿ ಕರೆತಂದಿದ್ದರು.ಮುಂಬೈ ಮಹಾನಗರದಲ್ಲಿ ನಡೆದಿದ್ದ ಹಲವು ಅಪರಾಧ ಕೃತ್ಯಗಳಲ್ಲಿ ಪಾತ್ರದ ಹಿನ್ನಲೆಯಲ್ಲಿ ಆತನನನ್ನು ಮುಂಬೈ ಪೊಲೀಸರು ಸುದೀರ್ಘ ತನಿಖೆಗೊಳಪಡಿಸಿದ್ದರು. ಈಗ ಅವರ ಬಹುತೇಕ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ಬೆಂಗಳೂರಿನ ಕೊಲೆ ಪ್ರಕರಣಗಳ ಸಂಬಂಧ ಸುರೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲು ಸಿಸಿಬಿ ತಂಡ, ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ತೆರಳಿದೆ. ದಶಕಗಳಿಂದ ರವಿ ಪೂಜಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುರೇಶ್, ವಿದೇಶದಲ್ಲಿದ್ದ ರವಿ ಸೂಚನೆ ಮೇರೆಗೆ ಬೆಂಗಳೂರು, ಮಂಗಳೂರು ಹಾಗೂ ಮುಂಬೈ ಸೇರಿದಂತೆ ವಿವಿಧೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದ.2007ರ ಫೆಬ್ರವರಿ 15 ರಂದು ರವಿಪೂಜಾರಿ ಸೂಚನೆ ಮೇರೆಗೆ ಬೆಂಗಳೂರಿನ ಶಬನಂ ಡೆವಲಪರ್ಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ಹತ್ಯೆಗೀಡಾಗಿದ್ದರು. ಆ ದಿನ ನಗರದ ಹೋಟೆಲ್‌ವೊಂದರಲ್ಲಿ ಪ್ರವೀಣ್ ರಾವ್ ಹೆಸರಿನ ನಕಲಿ ದಾಖಲೆ ನೀಡಿ ವಾಸ್ತವ್ಯ ಹೂಡಿ ಗುಂಡಿನ ದಾಳಿಯನ್ನು ಸುರೇಶ್ ಉಸ್ತುವಾರಿ ವಹಿಸಿದ್ದ. ಈ ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆತನ ಪತ್ತೆ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು ಪ್ರಯೋಜನವಾಗಿರಲಿಲ್ಲ.
ಈಗ ಮುಂಬೈ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಹಳೆಯ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಲು ಸಿಸಿಬಿ ನಿರ್ಧರಿಸಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ರವಿಪೂಜಾರಿ ವಿರುದ್ಧ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ. ನ್ಯಾಯಾಲಯದ ಬಾಡಿ ವಾರೆಂಟ್ ಪಡೆದು ಮುಂಬೈಗೆ ತೆರಳಿದ ಸಿಸಿಬಿ ತಂಡವು, ಸುರೇಶ್ ಪೂಜಾರಿ ವಶಕ್ಕೆ ನೀಡುವಂತೆ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮುಂದಿನ ವಾರದಲ್ಲಿ ಆರೋಪಿಯನ್ನು ಕರೆ ತರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.