ತಿರುಮಲ – ತಿರುಪತಿಯ ವೆಂಕಟೇಶ್ವರನ ದರ್ಶನ ಎಲ್ಲಾ ಆಸ್ತಿಕರ ಕನಸು,ಏಳು ಬೆಟ್ಟದೊಡಯನ ದರ್ಶನಕ್ಕಾಗಿ ದೇಶದ ಎಲ್ಲಾ ಕಡೆಗಳಿಂದ ಭಕ್ತರು ವೆಂಕಟಗಿರಿಗೆ ಆಗಮಿಸಿ ತಮ್ಮ ಶಕ್ತಾನುಸಾರ ಕಾಣಿಕೆ ಸಲ್ಲಿಸಿ,ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಬ್ರಹ್ಮೋತ್ಸವ,ನವರಾತ್ರಿ, ವೈಕುಂಠ ಏಕಾದಶಿ ಸೇರಿದಂತೆ ಹಲವು ಪವಿತ್ರ ದಿನಗಳ ಸಮಯದಲ್ಲಿ ತಿರುಪತಿಯಲ್ಲಿ ಜನ ಸಾಗರವೇ ನೆರೆಯುತ್ತದೆ. ತಿಮ್ಮಪ್ಪನ ದರ್ಶನಕ್ಕಾಗಿ ಕಿಲೋಮೀಟರ್ ಗಳ ವರಗೆ ಸರತಿ ಸಾಲಿರುತ್ತದೆ ಈ ಬಾರಿ ಹೊಸ ವರ್ಷದ ಜೊತೆಗೆ ವೈಕುಂಠ ಏಕಾದಶಿ ಕೂಡ ಇದೆ.
ಹೊಸ ವರ್ಷಾರಂಭದಲ್ಲಿ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಮರುದಿನವೇ ವೈಕುಂಠ ಏಕಾದಶಿ ಕೂಡಾ ಇರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಹೀಗಾಗಿ ಈ ಬಾರಿ ತಿರುಪತಿಗೆ ಆಗಮಿಸುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಾಲಯ ಆಡಳಿತ ಮಂಡಳಿ ಎಸ್‌ಇಡಿ (ಸ್ಪೆಷಲ್ ಎಂಟ್ರಿ ದರ್ಶನ) ಟಿಕೆಟ್ ವ್ಯವಸ್ಥೆ ಮಾಡಿದೆ.
ಈ ಟಿಕೆಟ್‌ಗಳ ಬೆಲೆ 300 ರೂಪಾಯಿ ನಿಗಧಿ ಪಡಿಸಿದೆ. ಡಿಸೆಂಬರ್ 24ರಿಂದಲೇ ಈ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ. ಟಿಟಿಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಟಿಕೆಟ್‌ಗಳು ಲಭ್ಯವಿದೆ.
ಜನ ಜಂಗುಳಿ ತಡೆಗಟ್ಟಲು ಈ ಬಾರಿ ಆಡಳಿತ ಮಂಡಳಿ ಹೊಸ ವ್ಯವಸ್ಥೆ ಮಾಡಿದೆ.ಅದೇನೆಂದರೆ ಭಕ್ತರು ಖರೀದಿಸುವ ವಿಶೇಷ ಟಿಕೆಟ್‌ಗಳು ಜನವರಿ 1ರಿಂದ 11ರ ವರೆತೆ ಚಾಲ್ತಿಯಲ್ಲಿ ಇರುತ್ತವೆ.
ತಿರುಪತಿಯಲ್ಲಿ ವೈಕುಂಠ ಏಕಾದಶಿ ಸಂದರ್ಭದಲ್ಲಿ ವೈಕುಂಠ ದ್ವಾರದ ಮೂಲಕ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ತಿರುಪತಿ ತಿಮ್ಮಪ್ಪನ ಗರ್ಭಗುಡಿಯನ್ನು ಸುತ್ತುವರೆದಿರುವ ವೈಕುಂಠ ದ್ವಾರವನ್ನು 10 ದಿನಗಳ ತನಕ ತೆರೆಯಲು ಟಿಟಿಡಿ ತೀರ್ಮಾನಿಸಿದೆ. ವಿಶೇಷ ಟಿಕೆಟ್ ಪಡೆದವರು ವೈಕುಂಠ ದ್ವಾರದ ಮೂಲಕ ಸಾಗಬಹುದಾಗಿದೆ.
ಜನವರಿ 2ರಂದು ವೈಕುಂಠ ಏಕಾದಶಿ ಇದ್ದು, ಅಂದು ಭಕ್ತರು ವಿಶೇಷ ದರ್ಶನದ ಟಿಕೆಟ್ ಪಡೆದು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.
2023ರ ಜನವರಿ 1ರ 19:10ಕ್ಕೆ ವೈಕುಂಠ ಏಕಾದಶಿ ಪ್ರಾರಂಭವಾಗುತ್ತದೆ. ಜನವರಿ 2ರ 20.25ಕ್ಕೆ ಅಂತ್ಯಗೊಳ್ಳುತ್ತದೆ.ಆದರೂ ಕೂಡ ಹತ್ತು ದಿನಗಳ ಕಾಲ ವೈಕುಂಠ ದ್ವಾರದ ಬಾಗಿಲು ತೆರೆಯಲಿದ್ದು, ಭಕ್ತರು ಅಡೆ ತಡೆಯಿಲ್ಲದೆ ದರ್ಶನ ಪಡೆಯಬಹುದಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಜನವರಿ 1 ರಿಂದ 11ರ ತನಕ ಸರ್ವ ದರ್ಶನಂ ಟೋಕನ್‌ಗಳನ್ನು ಸಹ ಮಾರಾಟ ಮಾಡಲಿದೆ. ತಿರುಪತಿ ಮತ್ತು ತಿರುಮಲದ ಮೂಲ ಸ್ಥಳದಲ್ಲಿಯೇ ಈ ಟೋಕನ್‌ಗಳು ಭಕ್ತಾದಿಗಳಿಗೆ ಲಭ್ಯವಿದೆ.
ವೈಕುಂಠ ಏಕಾದಶಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ಆದ್ದರಿಂದ ವಸತಿ ವ್ಯವಸ್ಥೆಯ ಬಗ್ಗೆ ಗಮನ ಹರಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.