ಬೆಂಗಳೂರು,ಡಿ.18- ಜಾಗತಿಕ ಭಯೋತ್ಪಾದಕ ಐಸಿಸ್ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ-NIA) ರಾಜಧಾನಿ ಬೆಂಗಳೂರು, ಬಳ್ಳಾರಿ,ರಾಮನಗರ,ಮಾಗಡಿ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿದೆ.ಈ ವೇಳೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
ಬೆಂಗಳೂರಿನ ಸುಲ್ತಾನ್ ಪಾಳ್ಯ, ಆರ್‌ಟಿ ನಗರ, ಶಿವಾಜಿನಗರ, ಪುಲಿಕೇಶಿನಗರ ಸೇರಿದಂತೆ ನಗರದ 20ಕ್ಕೂ ಹೆಚ್ಚ ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.
ಹಿಂದೆ ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ದಾಳಿ ನಡೆಸಿದ ಸಮಯದಲ್ಲಿ ಲಭ್ಯವಾದ ಮಾಹಿತಿಯಂತೆ ಪುಲಿಕೇಶಿ ನಗರದ ಅಲಿ ಅಬ್ಬಾಸ್ ಮನೆ ಮೇಲೆ ಎನ್‌ಐಎ ತಂಡ ದಾಳಿ ಮಾಡಿತ್ತು. ಇದೀಗ ಅಲಿ ಅಬ್ಬಾಸ್ ಪೇಟಿವಾಲ ಬಳಿ ಹಲವಾರು ಸ್ಫೋಟಕ ಮಾಹಿತಿಗಳು ದೊರೆತಿವೆ.ಇದನ್ನು ಆಧರಿಸಿ ಪೇಟಿವಾಲ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ಶಮಿವುಲ್ಲಾ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದು,ಇಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಶಮಿವುಲ್ಲಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಈ ವೇಳೆ ಆತ ನೀಡಿದ ಮಾಹಿತಿ ಆಧಾರದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಬಳ್ಳಾರಿ ಪ್ರಧಾನ ಕಾರ್ಯದರ್ಶಿ ಸುಲೇಮಾನ್, ಅಜಾಜ್ ಅಹ್ಮದ್, ತಬ್ರೇಜ್, ಮುಜಾಮಿಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ವಾರ ಬೆಂಗಳೂರಿನ ಪುಲಕೇಶಿ ನಗರದಲ್ಲಿರುವ ಮೋರ್ ರಸ್ತೆಯ ಆಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್‍ಐಎ 16 ಲಕ್ಷಕ್ಕೂ ಹೆಚ್ಚು ನಗದು, ಲ್ಯಾಪ್‍ಟಾಪ್ ಸೇರಿದಂತೆ ಕೆಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಮೂಲತಃ ಮುಂಬೈ ಮೂಲದವನಾದ ಅಬ್ಬಾಸ್ ಪುಲಕೇಶಿ ನಗರದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಎನ್ನಲಾಗಿದೆ. ಮೊದಲು ಈತನನ್ನು ವಿಚಾರಣೆ ನಡೆಸಿದ್ದ ಎನ್‍ಐಎ ಅಧಿಕಾರಿಗಳು ನಂತರ ಸೂಕ್ತ ಮಾಹಿತಿ ಕಲೆ ಹಾಕಿ ಬಂಧಿಸಿದ್ದರು.
ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದು, ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುವ ಈತ ವಿದ್ಯಾವಂತ ಮುಸ್ಲಿಂ ಯುವಕರನ್ನು ಐಸಿಸ್ ಕಡೆ ಸೆಳೆಯುವಲ್ಲಿ ನಿರತನಾಗಿದ್ದ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಬಂಧಿಸಿದ್ದರು

