ಬೆಂಗಳೂರು, ಡಿ.9- ದೇಶಾದ್ಯಂತ ಭಯೋತ್ಪಾದಕ ಕೃತ್ಯ ನಡೆಸಲು ಜಾಗತಿಕ ಭಯೋತ್ಪಾದಕ ಸಂಘಟನೆ ‘ಐಸಿಸ್’ ಸಂಚು ರೂಪಿಸಿದೆ ಎಂಬ ಗುಪ್ತದಳದ ಸಂದೇಶದ ಬೆನ್ನುಹತ್ತಿದ ರಾಷ್ಟ್ರೀಯ ತನಿಖಾ ದಳ (ಎನ್ ಐಎ-NIA) ಅಧಿಕಾರಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದ 44ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದರು.
ಎನ್ಐಎ ಅಧಿಕಾರಿಗಳು ಕರ್ನಾಟಕದ ಒಂದು ಕಡೆ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
ಐಸಿಸ್ ಭಯೋತ್ಪಾದನೆ ಸಂಘಟನೆಯ ಜೊತೆ ಸೇರಿ ಸಂಚು ರೂಪಿಸಿದ ಪ್ರಕರಣದಲ್ಲಿ ಈವರೆಗೆ 13 ಜನ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಶಂಕಿತ ಉಗ್ರನಿಂದ 16 ಲಕ್ಷ 42 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಶಂಕಿತ ಉಗ್ರ ಡಾಟಾ ಕನ್ಸಲ್‌ಟೆಂಟ್ ಆಗಿ ಕೆಲಸ ಮಾಡುತ್ತಿದ್ದನು.
ಪುಣೆ ದಾಳಿ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ಬಂಧಿಸಲಾಗಿದೆ.
ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು ಸ್ಥಳಗಳ ಪೈಕಿ ಕರ್ನಾಟಕದಲ್ಲಿ ಒಂದು ಸ್ಥಳ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ ಒಂದು ಸ್ಥಳವನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದೆ.
ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಅಲಿ ಅಬ್ಬಾಸ್ ಎಂಬಾತನ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮುಂಬೈ ಮೂಲದ ಅಲಿ ಅಬ್ಬಾಸ್, ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದಾರೆ. 2018ರಲ್ಲಿ ಫ್ಲಾಟ್ ಖರೀದಿಸಿದ್ದ ಅಲಿ ಅಬ್ಬಾಸ್, ವೈದ್ಯೆಯಾಗಿರುವ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ವಾಸವಿದ್ದಾರೆ.
ಮಹಾರಾಷ್ಟ್ರದಲ್ಲಿ ಬಂಧನವಾಗಿದ್ದ ಶಂಕಿತನ ಜೊತೆಗೆ ಸಂಪರ್ಕದಲ್ಲಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆರೋಪಿಯ ಮೊಬೈಲ್, ಲ್ಯಾಪ್‌ಟಾಪ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ.
ಅಲ್-ಖೈದಾ ಮತ್ತು ಐಸಿಸ್ ಸೇರಿದಂತೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಹಿಂಸಾತ್ಮಕ ಉಗ್ರಗಾಮಿ ಸಿದ್ಧಾಂತದ ಬೆಳವಣಿಗೆಗೆ ಪ್ರತಿಜ್ಞೆ ಮಾಡಿದ ಆರೋಪಿಗಳು ಮತ್ತು ಅವರ ಸಹಚರರು ರೂಪಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ್ದಾಗಿದೆ ಮತ್ತು ಭಯೋತ್ಪಾದಕ ಗ್ಯಾಂಗ್ ಅನ್ನು ರಚಿಸಿರುವ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ ಈ ದಾಳಿಯನ್ನು ನಡೆಸಲಾಗಿದೆ.