ಬೆಂಗಳೂರು.
ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಸ್ಪರ್ಧೆ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ದೊರಕಿದೆ.
ಕಳೆದೊಂದು ತಿಂಗಳಿನಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕೊನೆಗೂ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
ಅದರಲ್ಲೂ ಕಳೆದ ಒಂದು ವಾರದಿಂದ ದೆಹಲಿ ಮತ್ತು ಕರ್ನಾಟಕದಲ್ಲಿ ವಿಭಿನ್ನ ರೀತಿಯ ರಾಜಕೀಯ ಚಟುವಟಿಕೆಗಳಿಗೆ ಯೋಗೇಶ್ವರ್ ನಡೆ ಅವಕಾಶ ಕಲ್ಪಿಸಿತ್ತು.
ಸದ್ಯ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದರೂ ಯೋಗೇಶ್ವರ್ ವಿಧಾನಸಭೆ ಚುನಾವಣೆ ಸ್ಪರ್ಧಿಸಬೇಕು ಎಂದು ಹಠ ತೊಟ್ಟಿದ್ದರು ಈ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸಿದ್ದರು ಅದೇ ರೀತಿಯಲ್ಲಿ ಜೆಡಿಎಸ್ ಕೂಡ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿತ್ತು.
ದೆಹಲಿ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರುವ ಕೇಂದ್ರ ಮಂತ್ರಿ ಕುಮಾರಸ್ವಾಮಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತರವಾದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ಬಿಟ್ಟು ಕೊಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ಅವರು ನಡೆಸಿದ ತಂತ್ರಗಳು ಯಶಸ್ವಿಯಾಗಲಿಲ್ಲ.
ಇದಕ್ಕೆ ಪ್ರಮುಖ ಕಾರಣ ಯೋಗೇಶ್ವರ್.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಯೋಗೇಶ್ವರ್ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಪಕ್ಷಕ್ಕಿಂತ ವ್ಯಕ್ತಿ ಪರಿವರ್ತಿಸುವಲ್ಲಿ ಯೋಗೇಶ್ವರ್ ಅವರದ್ದು ದೊಡ್ಡ ಪಾಲಿದೆ.
ಆರಂಭದಲ್ಲಿ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದವರು ಸಿ ಪಿ ಯೋಗೇಶ್ವರ್. ಸಿನಿಮಾ ನಟನಾಗಿ ಹೆಸರು ಮಾಡಿದ್ದ ಅವರು 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇದಾದ ನಂತರ 2004 ಮತ್ತು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು.
ಆ ಬಳಿಕ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು ಇದರಿಂದ ಉಂಟಾದ ಉಪಚುನಾವಣೆಯಲ್ಲಿ ಜೆಡಿಎಸ್ ನ ಅಶ್ವತ್ ವಿರುದ್ಧ ಸೋಲು ಅನುಭವಿಸಿದರು. ಇದಾದ ಬಳಿಕ 2011 ಹಾಗೂ 2013ರ ಚುನಾವಣೆಗಳಲ್ಲಿ ಕ್ರಮವಾಗಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿದ ಯೋಗೇಶ್ವರ್ ಪಕ್ಷಕ್ಕಿಂತಲೂ ವ್ಯಕ್ತಿಯೇ ಪ್ರಮುಖ ಎನ್ನುವುದನ್ನು ಸಾಕ್ಷೀಕರಿಸಿದರು. 2018ರ ಚುನಾವಣೆಯ ಹಣಾಹಣಿಯ ವೇಳೆಗೆ ಮರಳಿ ಪಕ್ಷ ಬದಲಾವಣೆ ಮಾಡಿದ ಯೋಗೇಶ್ವರ್ ಎಸ್ ಪಿ ತೊರೆದು ಬಿಜೆಪಿ ಸೇರಿದ ಅವರು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎದುರು ಸೋಲು ಅನುಭವಿಸುತ್ತಾರೆ.
ಇದೀಗ ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು ಯೋಗೇಶ್ವರ್ ಮರು ಆಯ್ಕೆ ಬಯಸಿದ್ದಾರೆ.
ಜೆಡಿಎಸ್ ಈ ಕ್ಷೇತ್ರದಲ್ಲಿ ಗೆದ್ದಿದ್ದು ಆ ಪಕ್ಷಕ್ಕೆ ಸ್ಥಾನ ಬಿಟ್ಟುಕೊಟ್ಟಲ್ಲಿ ರಾಜಕೀಯವಾಗಿ ತಾವು ಈ ಕ್ಷೇತ್ರವನ್ನು ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ ಯೋಗೇಶ್ವರ್ ಚುನಾವಣೆಗೆ ಸ್ಪರ್ಧಿಸಲು ಹಠ ತೊಟ್ಟರು. ಮತ್ತೊಂದು ಕಡೆ ಈ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಮೂಲಕ ಅವರಿಗೆ ರಾಜಕೀಯ ಮರುಜನ್ಮ ನೀಡಬೇಕು ಎಂದು ಬಯಸಿದ ಕುಮಾರಸ್ವಾಮಿ, ಹಲವಾರು ಪಟ್ಟುಗಳನ್ನು ಹಾಕಿದರೂ ಅದು ಯಶಸ್ವಿಯಾಗಲಿಲ್ಲ.
ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಯೋಗೇಶ್ವರ್ ಅವರ ಬೆಂಬಲ ಇಲ್ಲದೆ ತಮ್ಮ ಪುತ್ರ ಗೆಲ್ಲಲು ಸಾಧ್ಯವಿಲ್ಲ ಎಂದು ಬಂದ ವರದಿಗಳು ಕುಮಾರಸ್ವಾಮಿ ಅವರನ್ನು ನಿದ್ದೆಗೆಡುವಂತೆ ಮಾಡಿದವು.
ಹೀಗಾಗಿ ತಮ್ಮ ವಲಸೆ ಬದಲಾಯಿಸಿದ ಕುಮಾರಸ್ವಾಮಿಯವರು ಈ ಕ್ಷೇತ್ರದಿಂದ ಯೋಗೇಶ್ವರ ಅವರೇ ತಮ್ಮ ಪಕ್ಷದ ಚಿನ್ಹೆ ಯಲ್ಲಿ ಸ್ಪರ್ಧಿಸಲಿ ಎಂಬ ಆಹ್ವಾನ ನೀಡಿದರು ಮೊದಲಿಗೆ ಇದು ಒಳ್ಳೆಯ ಸಲಹೆ ಎಂದು ಭಾವಿಸಿದ ಯೋಗೇಶ್ವರ್ ಅದಕ್ಕಾಗಿ ತಯಾರಿ ನಡೆಸಿ ಸಮೀಕ್ಷೆ ಮಾಡಿಸಿದರು ಆದರೆ ಈ ಸಮೀಕ್ಷೆಯಲ್ಲಿ ಅವರಿಗೆ ವ್ಯತರಿಕ್ತವಾದ ವರದಿಗಳು ಬಂದವು. ಯೋಗೇಶ್ವರ್ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ವಿವರಣೆ, ಆ ವರದಿಯಲ್ಲಿತ್ತು.
ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ತಮ್ಮ ವರಸೆ ಬದಲಾಯಿಸಿ ಇದೀಗ ಕಾಂಗ್ರೆಸ್ ಸೇರಿದ್ದಾರೆ. ಕ್ಷೇತ್ರ ಒಟ್ಟು 2,17,573 ಮತದಾರರನ್ನು ಹೊಂದಿದೆ. ಇದರಲ್ಲಿ ಒಕ್ಕಲಿಗರು 1,05,000, ಪರಿಶಿಷ್ಟ ಜಾತಿಯ 40,000, ಮುಸ್ಲಿಂ ಸಮುದಾಯದ 35,000, ಲಿಂಗಾಯತರ 11,000, ಹಾಗೂ ಕುರುಬರು 8,000 ಇದ್ದರೆ, ಇತರೆ ವರ್ಗದ 31,000 ಮತಗಳಿವೆ.
ಹೀಗಿರುವಲ್ಲಿ ಯೋಗೇಶ್ವರ್ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಮುಸ್ಲಿಂ ಕುರುಬ ಮತ್ತು ಪರಿಶಿಷ್ಟ ಸಮುದಾಯದ ಮತಗಳು ಯಾವುದೇ ಕಾರಣಕ್ಕೂ ತಮಗೆ ಬೀಳುವುದಿಲ್ಲ ಎಂಬುದನ್ನು ಅರಿತುಕೊಂಡ ಅವರು ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಮೂಲಕ ಸುಮಾರು 60,000 ಗ್ಯಾರಂಟಿ ಮಾತುಗಳೊಂದಿಗೆ ಚುನಾವಣೆ ಕಣಕ್ಕೆ ಇಳಿಯುತ್ತಿದ್ದು ಕಥನ ಕೂತುಹಲ ಮೂಡಿಸಿದೆ.
Previous Articleನಟ, ರಾಜಕಾರಣಿ ಸಿ.ಪಿ. ಯೋಗೇಶ್ವರ್
Next Article ಮೊಬೈಲ್ ಅಲ್ಲ ಟವರ್ ಕದ್ದೊಯ್ದ ಕಳ್ಳರು..