ಬೆಂಗಳೂರು, ಅ.13 – ರೈಡ್ ಶೇರಿಂಗ್ ಆಪ್ ಮೂಲಕ ಕ್ಯಾಬ್ ಬುಕ್ ಮಾಡಿ ರದ್ದುಪಡಿಸಿ ದ ಮಹಿಳೆಯ ವಾಟ್ಸಾಪ್ಗೆ ಕಾಮುಕ ಚಾಲಕನೊಬ್ಬ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಿರುವ ವಿಲಕ್ಷಣ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಸುಮಾರು 32 ವರ್ಷದ ಪರಿಣಿತಿ (ಹೆಸರು ಬದಲಿಸಲಾಗಿದೆ) ಎನ್ನುವ ಮಹಿಳೆ, ತನ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಕ್ಯಾಬ್ ಬುಕ್ ಮಾಡಿದ್ದಾಳೆ. ಆದರೆ ಕ್ಯಾಬ್ ಬರುವುದು ತಡವಾಗಿದ್ದರಿಂದ ರೈಡ್ ಕ್ಯಾನ್ಸಲ್ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಕ್ಯಾಬ್ ಚಾಲಕ (Cab Driver) ದಿನೇಶ್ ಎನ್ನುವಾತ ಬುಕ್ ಮಾಡಿದ್ದ ಮಹಿಳೆಯ ವಾಟ್ಸಪ್ ನಂಬರ್ಗೆ ನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆದ ಮಹಿಳೆ ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಪೊಲೀಸರು ಆರೋಪಿ ಚಾಲಕ ದಿನೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ದೂರಿನ ವಿವರ:
ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಪೋಷಕರ ಸಭೆ ಹಿನ್ನೆಲೆಯಲ್ಲಿ ಶಾಲೆಗೆ ಹೋಗಿದ್ದೆ. ಬಳಿಕ ವಾಪಸ್ ಮನೆಗೆ ಬರುವಾಗ ಮಗಳು ನಡೆಯುವುದಕ್ಕೆ ತಯಾರಿಲ್ಲದೆ ಹಠ ಮಾಡಿದಳು. ಈ ಹಿನ್ನಲೆಯಲ್ಲಿ ಕ್ಯಾಬ್ ಬುಕ್ ಮಾಡಿದ್ದೆ. ಆದರೆ, ಕ್ಯಾಬ್ ಬೇಗ ಬರಲಿಲ್ಲ. ಕ್ಯಾಬ್ ಚಾಲಕ, ಫೋನ್ ಕರೆ ಮಾಡಿ ಬರುತ್ತಿರುವುದಾಗಿ ತಿಳಿಸಿದ್ದ.
ಮಗಳು ಹಠ ಹಿಡಿದು ಅಳುತ್ತಿರುವುದನ್ನು ತಿಳಿಸಿ ಬೇಗ ಬರುಲು ಹೇಳಿದ್ದೆ. ಆದರೂ ಕ್ಯಾಬ್ ಬೇಗ ಬರಲಿಲ್ಲ. ಇತ್ತ ಮಗಳು ಸಹ ಜೋರಾಗಿ ಅಳುವುದಕ್ಕೆ ಶುರುಮಾಡಿದಳು. ಅದೇ ವೇಳೆ ಅಲ್ಲೇ ಆಟೋ ಕಾಣಿಸಿತ್ತು. ಅದರಲ್ಲಿ ಹೋಗಬೇಕು ಎಂದು ಹಠ ಹಿಡಿದಳು. ಹೀಗಾಗಿ ಆಪ್ ಮೂಲಕ ಬುಕ್ ಮಾಡಿದ್ದ ಕ್ಯಾಬ್ ಕ್ಯಾನ್ಸಲ್ ಮಾಡಿದ್ದೆ. ಇದಕ್ಕಾಗಿ ನನ್ನ ಖಾತೆಯಿಂದ 60 ರೂ ಕಡಿತವಾಗಿದೆ.
ಕ್ಷಮೆಯಾಚಿಸಿದ ಮಹಿಳೆ:
ರೈಡ್ ರದ್ದು ಮಾಡಿದ್ದೆ ತಡ ಚಾಲಕ ದಿನೇಶ್ ಫೋನ್ ಕರೆ ಮಾಡಿ, ಈಗಾಗಲೇ 5 ಕಿ.ಮೀ. ಬಂದಿದ್ದೆ. ಇನ್ನೇನು ಲೊಕೇಶನ್ ಸಮೀಪ ಇರುವಾಗ ರೈಡ್ ಕ್ಯಾನ್ಸಲ್ ಮಾಡಿದ್ರಿ. ತೊಂದರೆ ಆಯಿತು ಎಂದು ಕಿರಿಕಿರಿ ಮಾಡಲಾರಂಭಿಸಿದ್ದ. ಮಗಳು ಹಠ ಹಿಡಿದು ಅಳುತ್ತಿದ್ದ ಕಾರಣವನ್ನೂ ತಿಳಿಸಿದೆ. ಈ ಬಗ್ಗೆ ಕ್ಷಮೆಯಾಚಿಸಿದೆ. ಆದರೂ ಬಿಡದೆ ಪದೇಪದೆ ಫೋನ್ ಕರೆ ಮಾಡಿ ಕಿರಿಕಿರಿ ಉಂಟುಮಾಡಿದ್ದ. ಮೆಸೇಜ್ ಮೇಲೆ ಮೆಸೇಜ್ ಕಳುಹಿಸಿದ್ದ. ಅದರಲ್ಲಿ ಅಶ್ಲೀಲ ಫೋಟೋಸ್ ಮತ್ತು ವಿಡಿಯೋಸ್ ಕೂಡ ಇದ್ದವು .
ಅದನ್ನು ನೋಡಿ ಗಾಬರಿಯಾಗಿ ಅಳುತ್ತಿದ್ದಾಗ, ನೆರೆಮನೆಯವರು ಫೋನ್ ತಗೊಂಡು ಆ ಟ್ಯಾಕ್ಸಿ ಚಾಲಕನಿಗೆ ಬೈದಿದ್ದರು. ಇದಾಗುತ್ತಿದ್ದಂತೆ ಆತ ವಾಟ್ಸಾಪ್ ಸಂದೇಶಗಳನ್ನು ಡಿಲೀಟ್ ಮಾಡಿಕೊಂಡಿದ್ದಾನೆ ಎಂದು ಮಹಿಳೆ, ಅ.9ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಕ್ಯಾಬ್ ಚಾಲಕ ದಿನೇಶ್ಗಾಗಿ ಹುಡುಕಾಟ ನಡೆಸಿದ್ದಾರೆ.