ಬೆಂಗಳೂರು,ಸೆ.20- ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ರೂಢಿಗತ ಕನ್ನಗಳ್ಳರನ್ನು ಬಂಧಿಸಿರುವ ಅಶೋಕನಗರ ಪೊಲೀಸರು 12.5 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಣ್ಯದ ಕಾಂತರಾಜು ಅಲಿಯಾಸ್ ಮೋರಿ(45)ಹಾಗೂ ಸುರೇಶ್ ಅಲಿಯಾಸ್ ಸೂಫ್ ಸೂರಿ(47)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಮೂರು ಪ್ರಕರಣಗಳಿಗೆ ಸೇರಿದ 12.5 ಲಕ್ಷ ರೂ ಮೌಲ್ಯದ 269 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಆರೋಪಿಗಳು ಹಿಂದೆ ರಾಜಗೋಪಾಲ್ ನಗರ, ಆರ್.ಎಂ.ಸಿ ಯಾರ್ಡ್, ಚಂದ್ರಾಲೇಔಟ್, ವಿಜಯನಗರ, ಸಿಸಿಬಿ, ನಂದಿನ ಲೇಔಟ್, ಕೋರಮಂಗಲ, ಬಸವೇಶ್ವರನಗರ, ಬ್ಯಾಡರಹಳ್ಳಿ, ಮಂಡ್ಯ, ಹಾಸನ, ತಿಪಟೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದರೂ ಬುದ್ಧಿ ಕಲಿಯದೆ ಮತ್ತೆ ಹಣದಾಸೆಗೆ ಹಳೆ ಚಾಳಿ ಮುಂದುವರೆಸಿದ್ದರು ಎಂದು ತಿಳಿಸಿದರು.
ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಹಗಲು ರಾತ್ರಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.
ಕಳ್ಳತನ ಮಾಡಿದ ಒಡವೆಗಳನ್ನು ಬೇರೆ
ಬೇರೆ ಒಡವೆ ಅಂಗಡಿಗಳಲ್ಲಿ ಗಿರವಿಯಿಟ್ಟು ಬಳಿಕ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಆರೋಪಿ ಮೋರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಮೋರಿಯಲ್ಲಿ ಹೆಚ್ಚು ಕಳೆಯುತ್ತಿದ್ದು ಅದರಿಂದಾಗಿ ಮೋರಿ ಎಂದೇ ಕುಖ್ಯಾತಿ ಹೊಂದಿದ್ದ ಎಂದು ತಿಳಿಸಿದರು.
ಅಶೋಕನಗರದಲ್ಲಿ ಮನೆಕಳವು ಪ್ರಕರಣ ಬೆನ್ನತ್ತಿದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
Previous Articleಅನುರಾಗ್ ತಿವಾರಿ ಸಾವು ಪ್ರಕರಣ
Next Article ಕಾಂಗ್ರೆಸ್ ಗಂಜಿಗಿರಾಕಿಗಳು- ಬಿಜೆಪಿ ತಿರುಗೇಟು