ಬೆಂಗಳೂರು, ನ.17- ದೀಪಾವಳಿ ಹಿನ್ನೆಲೆಯಲ್ಲಿ ತಮ್ಮ ಮನೆಯ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದದ್ದಕ್ಕೆ ಬೆಸ್ಕಾಂ ವಿಧಿಸಿದ್ದ 68,526 ರೂಪಾಯಿ ದಂಡವನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ (Kumaraswamy) ಪಾವತಿಸಿದ್ದಾರೆ.
ದಂಡ ಪಾವತಿಯ ರಸೀದಿಗಳನ್ನು ಪ್ರದರ್ಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧದ ಕ್ರಮ. ಅನ್ಯಾಯ ಎಂದು ಹೇಳಿದರು. ದಂಡದ ಮೊತ್ತ ಲೆಕ್ಕ ಹಾಕಿದ ವಿಧಾನ ಹಾಗೂ ಎಫ್‌ಐಆರ್‌ನಲ್ಲಿರುವ ಲೋಪದೋಷಗಳ ಬಗ್ಗೆ ವಿವರಿಸಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ, ನನ್ನನ್ನು ರಾಜಕೀಯವಾಗಿ ಬೇಟೆಯಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅನ್ಯಾಯ ಹಾಗೂ ಅತಿಯಾದ ದಂಡ ವಿಧಿಸಿದ್ದಕ್ಕಾಗಿ, ಓರ್ವ ಗ್ರಾಹಕನಾಗಿ ಇದರ ವಿರುದ್ಧ ಧ್ವನಿ ಎತ್ತುವುದು ನನ್ನ ಕರ್ತವ್ಯ.ಸಿಎಂ ಹಾಗೂ ಡಿಸಿಎಂ ನೇತೃತ್ವದ ಸರ್ಕಾರದಲ್ಲಿ ಅಧಿಕಾರದ ದುರುಪಯೋಗ ಆಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಕ್ಕಾಗಿ ನನ್ನ ವಿರುದ್ಧ ರಾಜಕೀಯ ಸಂಚು ನಡೆಸಲಾಗುತ್ತಿದೆ ಎಂದು ದೂರಿದರು.
ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ.ಬಿಡದಿ ಬಳಿ ತಾವು ಖರೀದಿಸಿರುವ ಆಸ್ತಿ ಹಾಗೂ ಜಂತ್ಕಲ್ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆಯನ್ನು ಬೇಗ ಪೂರ್ಣಗೊಳಿಸಲಿ ಎಂದು ಸವಾಲು ಹಾಕಿದರು. ಬಿಡದಿ ಬಳಿ ಜಮೀನು ಖರೀದಿಸಿ 38 ವರ್ಷವಾಗಿದೆ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕಾಲದಿಂದ ಇಲ್ಲಿಯವರೆಗೆ ಆಗಿರುವ ತನಿಖೆ ಬಗ್ಗೆ ಪುಸ್ತಕ ಬರೆಯಬಹುದು. ಲೋಕಾಯುಕ್ತ, ಸಿಐಡಿ ತನಿಖೆ ಎಲ್ಲವೂ ಆಗಿದೆ. ಇನ್ನೊಮ್ಮೆ ತನಿಖೆ ಮಾಡಿಸಿ ನನಗಿನ್ನೂ ಮೂರ್ನಾಲ್ಕು ಎಕರೆ ಜಮೀನು ಸಿಕ್ಕಿಲ್ಲ. ಅದನ್ನು ಹುಡುಕಿ ಕೊಡಲಿ ಎಂದು ಹೇಳಿದರು.
ಮುಖ್ಯಮಂತ್ರಿ ಉಸ್ತುವಾರಿಯಲ್ಲೇ ಜಂತ್ಕಲ್ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾನು ಹೆದರಿಕೊಳ್ಳುವುದಿಲ್ಲ. ಜಂತ್ಕಲ್ ಪ್ರಕರಣ ಮುಗಿಸಲು ಮುಖ್ಯಮಂತ್ರಿಯಾಗಿದ್ದಾಗ ಒತ್ತಡವನ್ನೂ ಹೇರಿಲ್ಲ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕರಿಂದ 20 ಲಕ್ಷ ರೂ.ವನ್ನು ಪುತ್ರನ ಖಾತೆಗೆ ಪಡೆದುಕೊಂಡಿದ್ದ ಅಧಿಕಾರಿ ಜೈಲಿಗೆ ಹೋಗಿದ್ದಾರೆ. ಅದನ್ನು ನನ್ನ ತಲೆಗೆ ಕಟ್ಟಲು ಹುನ್ನಾರ ನಡೆಸಿದ್ದರು ಎಂದರು.
ವಿರೋಧ ಪಕ್ಷದ ಸ್ಥಾನದಲ್ಲಿದ್ದು ಕಾನೂನು ಬಾಹಿರ ಕೃತ್ಯಗಳನ್ನು ಹೊರಗೆ ತರುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಮಿನರ್ವ ಮಿಲ್‍ಗೆ ಸುಮಾರು 1934ರಲ್ಲಿ ಮಂಜೂರಾಗಿದ್ದ ಜಮೀನು 24 ಎಕರೆ ಕರಾಬ್ ಭೂಮಿಯಲ್ಲಿ ಲೂಲು ಮಾಲ್ ನಿರ್ಮಿಸಲಾಗಿದೆ. ಅಲ್ಲಿದ್ದ ಹೈಟೆನ್ಷನ್ ವೈರ್‍ಗಳನ್ನು ಅಂಡರ್‍ಗ್ರೌಂಡ್‍ನಲ್ಲಿ ತೆಗೆದುಕೊಂಡು ಹೋಗಲಾಗಿದೆ. ಇದಕ್ಕೆ ಕಂಪನಿಯಿಂದ ಹಣ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.