ಬೆಂಗಳೂರು, ಸೆ.20 – ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ನಡೆಸಿರುವ ಪ್ರಕರಣದ ಮೂರನೇ ಆರೋಪಿ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀಯನ್ನು ಪತ್ತೆಹಚ್ಚಿ ಬಂಧಿಸಲು ಸಿಸಿಬಿ ಪೊಲೀಸರು ಪಟ್ಟ ಪಾಡು, ಹಾಕಿದ ವೇಷ ಅಷ್ಟಿಷ್ಟಲ್ಲ.!
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸೆ. 11ರಂದು ರಾತ್ರಿ ಮಠದಿಂದ ಕಣ್ಮರೆಯಾಗಿದ್ದ ಹಾಲಶ್ರೀ (Halashree) ಹಗಲಿರುಳು ನಡೆಸಿದ ಕಾರ್ಯಾಚರಣೆಯ ಫಲವಾಗಿ ನಿನ್ನೆ ಮುಂಜಾನೆ ಒಡಿಶಾದ ಕಟಕ್‌ನಲ್ಲಿ ರೈಲಿನಲ್ಲಿ ಸಿಕ್ಕಿಬಿದ್ದಿದ್ದರು. ಅಂದರೆ ಅವರು ಕರ್ನಾಟಕ ಬಿಟ್ಟು ತೆಲಂಗಾಣ, ಆಂಧ್ರ ಪ್ರದೇಶ ದಾಟಿ ಒಡಿಶಾ ತಲುಪಿದ್ದರು. ಹೀಗೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಅವರ ಪತ್ತೆಯಾಗಿ ಸಿಸಿಬಿ ಪೊಲೀಸರು ಮಾಡದ ಪ್ರಯತ್ನಗಳೇ ಇಲ್ಲ! ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾವಿ ತೆಗೆದು ಟೀ ಶರ್ಟ್, ಬರ್ಮುಡಾ ಧರಿಸಿದ್ದ ಹಾಲಶ್ರೀ ಬಂಧನಕ್ಕೆ ಪೊಲೀಸರೇ ಕಾವಿ ತೊಟ್ಟು ಅರ್ಚಕರ ವೇಷ ಹಾಕಿದ್ದರು.
ಹಾಲಶ್ರೀ ಸ್ವಾಮೀಜಿ (Halashree) ನಾಪತ್ತೆಯಾಗಿ ಹಲವು ದಿನಗಳ ಕಾಲ ಮೊಬೈಲ್ ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ ಅಥವಾ ಬಳಸಿದ ಮೊಬೈಲ್ ಪೊಲೀಸರ ಟ್ರ್ಯಾಕ್‌ಗೆ ಸಿಕ್ಕಿರಲಿಲ್ಲ. ಬಳಿಕ ಮೊಬೈಲ್ ಟ್ರ್ಯಾಕ್‌ಗೆ ಸಿಕ್ಕದರೂ ಗಂಟೆಗೊಂದು ತಾಣ ಬದಲಾಯಿಸುವುದು, ಮೊಬೈಲ್ ಬದಲಾಯಿಸುವುದರಿಂದ ಅವರನ್ನು ಹಿಡಿಯುವುದೇ ಕಷ್ಟಕರವಾಗಿತ್ತು.
ಈ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ತಂಡ ಟೆಕ್ನಿಕಲ್ ಎವಿಡೆನ್ಸ್, ಟ್ರ್ಯಾಕಿಂಗ್ ಬಿಟ್ಟು ಸಾಂಪ್ರದಾಯಿಕ ತಂತ್ರ ಬಳಕೆಗೆ ಮುಂದಾಯಿತು. ಅದುವೇ ಅರ್ಚಕರ ವೇಷ. ಹಾಲಶ್ರೀ ಸ್ವಾಮೀಜಿ ಹೈದರಾಬಾದ್ ತಲುಪಿದ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲಿಂದ ಅವರು ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ಲ್ಯಾನ್ ಹೊಂದಿರುವುದು ಅರಿವಿಗೆ ಬಂದಿತ್ತು. ಇದರ ಚೂರು ಪಾರು ಮಾಹಿತಿಯನ್ನು ಶ್ರೀಗಳ ಚಾಲಕ ನೀಡಿದ್ದ!
ಆದರೆ, ಅವರನ್ನು ಹುಡುಕುವುದು ಹೇಗೆ, ತಡೆಯುವುದು ಹೇಗೆ ಎನ್ನುವುದೇ ದೊಡ್ಡ ಸವಾಲಾಗಿತ್ತು. ಇದಕ್ಕೆ ಪೊಲೀಸರು ದೇವಸ್ಥಾನಗಳಲ್ಲಿ ಹುಡುಕುವ ಪ್ಲ್ಯಾನ್ ಮಾಡಿದರು. ಹಾಲಶ್ರೀ ಸ್ವಾಮೀಜಿ ಸಂಪರ್ಕ ಇರುವ, ಇತ್ತೀಚೆಗೆ ಭೇಟಿ ನೀಡಿರುವ ದೇವಸ್ಥಾನ, ಮಠ, ಆಶ್ರಮಗಳನ್ನು ಪಟ್ಟಿ ಮಾಡಿದರು. ಹೈದರಾಬಾದ್ ಸುತ್ತಮುತ್ತಲಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ಹುಡುಕುವ ಪ್ಲಾನ್ ಮಾಡಿದ್ದರು.
ಅರ್ಚಕರ ವೇಷ:
ಈ ಹಿನ್ನೆಲೆಯಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಎಂಬ ನಾಲ್ವರು ಸಿಬ್ಬಂದಿ ಅರ್ಚಕರ ವೇಷ ಹಾಕಿದರು. ಅದರಲ್ಲೂ ಶೃಂಗೇರಿ ದೇವಸ್ಥಾನದ ಅರ್ಚಕರ ಮಾದರಿಯಲ್ಲಿ ಮಡಿಬಟ್ಟೆ ಧರಿಸಿ ಕಾರ್ಯಾಚರಣೆಗೆ ಇಳಿದರು.
ಸ್ವಾಮಿಜೀ ಬೆನ್ನತ್ತಿದ್ದ ನಾಲ್ವರು ಅರ್ಚಕರ ವೇಷದಲ್ಲಿ ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರು. ನಾವು ಶೃಂಗೇರಿಯಿಂದ ಬಂದಿದ್ದೇವೆ ಎಂದು ವಿಶೇಷ ಪೂಜೆ ಸಲ್ಲಿಸುವ ನಾಟಕವಾಡಿದರು. ಒಂದೊಂದೇ ಮಠ, ದೇವಸ್ಥಾನ ಮುಗಿಸಿ ಒರಿಸ್ಸಾದ ಪೂರಿ ಜಗನ್ನಾಥ ದೇವಸ್ಥಾನಕ್ಕೂ ಹೋಗಿದ್ದರು. ಹಾಲಶ್ರೀ ಸ್ವಾಮೀಜಿ ಅಲ್ಲಿಗೆ ಹೋದ ಮಾಹಿತಿ ಅವರಿಗೆ ಸಿಕ್ಕಿತ್ತು.
ಪುರಿಯಲ್ಲಿ ಜಸ್ಟ್ ಮಿಸ್ !
ಇಡೀ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಮಡಿತೊಟ್ಟ ಬಟ್ಟೆಯಲ್ಲಿ ಹಾಲಶ್ರೀಗಾಗಿ ಹುಡುಕಾಟ ನಡೆಸಿದರು. ಅಲ್ಲಿ ಕೂಡಾ ʻʻನಾವು ಶೃಂಗೇರಿಯಿಂದ ಬಂದಿದ್ದೇವೆ ಗಣೇಶ ಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಬೇಕು ಎಂದಿದ್ದ ಪೊಲೀಸರ ಮಾತನ್ನು ಕದ್ದು ಕೇಳಿಸಿಕೊಂಡಿದ್ದರೋ ಗೊತ್ತಿಲ್ಲ, ಅಲ್ಲೇ ಇದ್ದರೆನ್ನಲಾದ ಹಾಲಶ್ರೀ ತಕ್ಷಣವೇ ಕಾಲ್ಕಿತ್ತಿದ್ದರು.
ಈ ನಡುವೆ, ಇಲ್ಲೇ ಉಳಿದರೆ ಅಪಾಯವಿದೆ ಎಂದು ತಿಳಿದ ಸ್ವಾಮೀಜಿ, ಪೂರಿಯಿಂದ ಹೊರಟು ಭುವನೇಶ್ವರದಿಂದ ಬಿಹಾರದ ಬೋಧಗಯಾಕ್ಕೆ ರೈಲ್ವೆ ಟಿಕೆಟ್ ಬುಕ್ ಮಾಡಿದ್ದರು. ಈ ರೈಲು ಟಿಕೆಟ್‌ನ ಪಿಎನ್‌ಆರ್ ನಂಬರ್ ಪೊಲೀಸರಿಗೆ ಸಿಕ್ಕಿ ಕೂಡಲೇ ಅವರು ಅಲರ್ಟ್ ಆದರು.
ಕಟಕ್ ನಲ್ಲಿ ಸಿಕ್ಕಿಬಿದ್ದ:
ಆದರೆ ಇನ್ನಷ್ಟು ಚಾಲಾಕಿಯಾದ ಹಾಲಶ್ರೀ ಭುವನೇಶ್ವರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದು ಎಂದು ಶಂಕಿಸಿ ಅಲ್ಲಿಂದ 25 ಕಿಲೋಮೀಟರ್ ಇರುವ ಕಟಕ್ ರೈಲ್ವೆ ನಿಲ್ದಾಣಕ್ಕೆ ಬಸ್‌ನಲ್ಲಿ ಪ್ರಯಾಣಿಸಿದರು.
ಆದರೆ, ಸಿಸಿಬಿ ಪೊಲೀಸರು ಭುವನೇಶ್ವರ, ಅದರ ಮುಂದಿನ ಕಟಕ್ ಮಾತ್ರವಲ್ಲ ಬೋಧಗಯಾದಲ್ಲೂ ಅವರಿಗೆ ಖೆಡ್ಡಾ ತೋಡಿದ್ದರು. ಅಲ್ಲೆಲ್ಲ ಅವರನ್ನು ಹಿಡಿಯಲು ಒಡಿಶಾ ಪೊಲೀಸರ ಸಹಾಯ ಕೇಳಿದ್ದರು. ಭುವನೇಶ್ವರದಲ್ಲಿ ರೈಲು ಹತ್ತದ ಸ್ವಾಮೀಜಿ ಕಟಕ್‌ನಲ್ಲಿ ರೈಲು ಹತ್ತಿದಾಗ ಅಲ್ಲಿ ಕಾದು ಕುಳಿತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.