ಬೆಂಗಳೂರು – ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha 2024) ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಸಂಕಲ್ಪದೊಂದಿಗೆ ಬಿಜೆಪಿಯ ನೂತನ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅಧಿಕಾರ ಸ್ವೀಕರಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಅನೇಕ ಧಾರ್ಮಿಕ ವಿಧಿ ವಿಧಾನಗಳು ನಂತರ ನಿರ್ಗಮಿತ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭಕ್ಕೆಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ತೇಜಸ್ವಿ ಸೂರ್ಯ, ಬಿ.ವೈ. ರಾಘವೇಂದ್ರ, ಲೆಹರ್‌ಸಿಂಗ್, ಗೋವಿಂದ ಕಾರಜೋಳ, ಹಲವು ಹಿರಿಯ ನಾಯಕರು ಸಾಕ್ಷಿಯಾದರು. ವಿಜಯೇಂದ್ರ ಅವರ ಪದಗ್ರಹಣ ಸಂದರ್ಭದಲ್ಲಿ ಹೊಸ ಹುರುಪು,ಉತ್ಸಾಹ ಮನೆ ಮಾಡಿತ್ತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು.
ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ವಿಜಯೇಂದ್ರ, ಮುಂಬರುವ ಲೋಕಸಭಾ ಚುನಾಣವೆ ಅಗ್ನಿಪರೀಕ್ಷೆಯಾಗಿದ್ದು, 28 ಕ್ಕೆ 28 ಕ್ಷೇತ್ರಗಳನ್ನೂ ಗೆದ್ದು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿ. ಇದಕ್ಕಾಗಿ ಎಲ್ಲರೂ ಒಗ್ಗೂಡಿಯೇ ಕೆಲಸ ಮಾಡುವ ಸಂಕಲ್ಪ ಮಾಡುತ್ತೇವೆ ಎಂದರು.
ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಕಳೆದ ಲೋಕಸಭಾ ಚುನಾವಣೆ ವೇಳೆ ಅಂದಿನ ಪಕ್ಷದ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದಾಗ ಹಲವರು ಹಾಸ್ಯ ಮಾಡಿದ್ದರು. ಒಗ್ಗಟ್ಟಿನಿಂದ ಹೋರಾಟ ನಡೆಸಿ 25 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತ್ತು. ದೇಶಕ್ಕಾಗಿ 1 ದಿನವೂ ರಜೆ ತೆಗೆದುಕೊಳ್ಳದೇ ಹಗಲಿರುಳೆನ್ನದೇ ಕೆಲಸ ಮಾಡುವ, ದೇಶವನ್ನು ಅಗ್ರಪಂಕ್ತಿ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸುವ ಮೋದಿಯವರ ಕನಸು ನನಸು ಮಾಡಲು ನಾವೆಲ್ಲ ಹಗಲಿರುಳೆನ್ನೇ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆ ಸೋಲಿ ಕಹಿಯನ್ನು ಮೆಟ್ಟಿ ಮುನ್ನಡೆಯಬೇಕು. ಅಧ್ಯಕ್ಷ ಸ್ಥಾನದ ಮಹತ್ವ ಮತ್ತು ಗೌರವ ಏನು ಎಂಬುದು ಗೊತ್ತಿದೆ. ದಶಕಗಳ ಕಾಲ ಕಾರ್ಯಕರ್ತರ ಬೆವರು ಮತ್ತು ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದೆ. ಹೀಗಾಗಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ.
ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರ್‍ಯಾರು ಬರ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಬರಪೀಡಿತ ಸ್ಥಳಗಳಿಗೆ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದರ್ಪದಿಂದ ಮೆರೆಯುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು.
ಮುಂದೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿವೆ. ಅದನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಿದ್ದೇವೆ. ಜತೆಗೆ ಲೋಕಸಭಾ ಚುನಾವಣೆಯಲ್ಲೂ 28 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುವ ಸಂಕಲ್ಪ ತಮ್ಮದು ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದರು.
ಬಿಜೆಪಿ ಅಧಿಕಾರಿದಲ್ಲಿದ್ದಾಗ ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್‌ನವರು ಶೇ. 40 ರ ಕಮಿಷನ್ ಆರೋಪವನ್ನು ಅನುಷ್ಠಾನ ಮಾಡುತ್ತಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.