ಬೆಂಗಳೂರು, ನ.15 – ಬಿಗ್ ಬಾಸ್ (Bigg Boss Kannada) ಸ್ಪರ್ಧಿ ತನಿಷಾ ವಿರುದ್ಧ ಜಾತಿನಿಂದನೆ ದೂರು ದಾಖಲಾದ ಬೆನ್ನಲ್ಲೇ ಬಿಗ್ ಬಾಸ್ ಸ್ಟುಡಿಯೋಗೆ ಕುಂಬಳಗೋಡು ಪೊಲೀಸರು ಧಾವಿಸಿ ತನಿಷಾ ಕುಪ್ಪಂಡ- ಪ್ರತಾಪ್ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾದ ಬೆನ್ನಲ್ಲೇ ಬಿಗ್ ಬಾಸ್ (Bigg Boss Kannada) ಸೆಟ್‌ಗೆ ತೆರಳಿದ ಕುಂಬಳಗೋಡು ಪೊಲೀಸರು ವಿಚಾರಣೆ ಮಾಡಲಾಗಿದ್ದು, ತನಿಷಾ ಧ್ವನಿ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಪ್ರೋಮೋದಲ್ಲಿರುವ ಧ್ವನಿಗೂ, ಹಾಗೂ ದೂರುದಾರರು ನೀಡಿರುವ ಧ್ವನಿ ಬಗ್ಗೆ ಪರಿಶೀಲನೆ ಮಾಡಲಾಗಿದೆ.
ಎರಡೂ ಮುದ್ರಿತ ಧ್ವನಿ ಸಂಗ್ರಹಿಸಿರುವ ಪೊಲೀಸರು, ಈ ಸಂಭಾಷಣೆ ಕುರಿತಂತೆ ಪ್ರತಾಪ್‌ಗೂ ವಿಚಾರಣೆ ಮಾಡಲಾಗಿದೆ. ತನಿಷಾ ಮತ್ತು ಪ್ರತಾಪ್ ಹೇಳಿಕೆ ಪಡೆದಿರೋ ಪೊಲೀಸರ ಮುಂದಿನ ನಡೆಯೇನು? ಎಂದು ಕಾದುನೋಡಬೇಕಿದೆ.
ಪ್ರಕರಣದ ವಿವರ:
ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ
ಪ್ರಕರಣ ದಾಖಲಾಗಿದ್ದು, ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 12ರಂದು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.
ಡ್ರೋನ್ ಪ್ರತಾಪ್‌ಗೆ ಮಾತನಾಡುವ ಭರದಲ್ಲಿ ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದ್ದು, ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಎಸ್‌ಸಿಎಸ್ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು.