ಬೆಂಗಳೂರು, ಅ.5 – ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಜೆಡಿಎಸ್ ವಲಯದಲ್ಲಿ ಅಪಸ್ವರ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲೂ ತೀವ್ರ ವಿರೋಧ ಕೇಳಿಬಂದಿದೆ.
ಉಭಯ ಪಕ್ಷಗಳ ನಡುವಿನ ಮೈತ್ರಿ ತೀರ್ಮಾನ ಅಧಿಕೃತವಾಗಿ ಹೊರಬಿದ್ದಲ್ಲಿ ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿ ಮಾಜಿ ಮಂತ್ರಿಬಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ ಸುದ್ದಿಗಾರರ ಜತೆ ಮಾತನಾಡಿದ ಅವರು,ಸದ್ಯ ಕೇಳಿಬಂದಿರುವ ಮೈತ್ರಿ ಪ್ರಸ್ತಾಪಕ್ಕೆ ತಮ್ಮ ಸಹಮತವಿಲ್ಲ. ಮೇಲಿನವರು ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
ಕೆಳಹಂತದ ಕಾರ್ಯಕರ್ತರು ಹಿಂಸೆ ಅನುಭವಿಸುತ್ತಾರೆ. ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಮೈತ್ರಿಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಅಧಿಕೃತ ಘೋಷಣೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ' ಎಂದರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮೊದಲಿನಿಂದಲೂ ಪರಸ್ಪರ ವಿರುದ್ಧವಾಗಿ ಇದ್ದವರು. ಪಕ್ಷದ ಕಾರ್ಯಕರ್ತರು ಅನುಭವಿಸಿದ ಕಿರುಕುಳವನ್ನು ಹತ್ತಿರದಿಂದ ಕಂಡಿದ್ದೇನೆ. ಪಕ್ಷಗಳು ಒಂದಾದರೂ, ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಅಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಮೈತ್ರಿ ವಿರೋಧಿಸಿ ಈಗಾಗಲೇ ಹಲವು ಕಾರ್ಯಕರ್ತರು, ಬೆಂಬಲಿಗರು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ. ಇದು ನನ್ನ ಕ್ಷೇತ್ರದ ಸಮಸ್ಯೆ ಮಾತ್ರವಲ್ಲ, ಇತರೆ ಶಾಸಕರೂ ತಮ್ಮ ಕ್ಷೇತ್ರಗಳಲ್ಲಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಹೇಳಿದರು.
ನಾನೂ ಸಹ 20 ವರ್ಷಗಳಿಂದ ಜೆಡಿಎಸ್ ಜತೆ ಸೆಣಸಾಟ ನಡೆಸಿಕೊಂಡು ಬಂದಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಹೊಂದಾಣಿಕೆಯಾದರೂ, ಕಾರ್ಯಕರ್ತರು ಪರಸ್ಪರ ಮತ ಚಲಾಯಿಸಲಿಲ್ಲ. ಇದರಿಂದ ಮೈತ್ರಿ ಎಷ್ಟು ಸ್ಥಾನದಲ್ಲಿ ಗೆಲುವು ಪಡೆಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ.ಎಂದರು.
ನಮಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೈಕಮಾಂಡ್.ಅವರು ನನಗೆ ಸದ್ಯ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಹಾಗಾಗಿ, ತಿಂಗಳಿನಿಂದ ಮೌನವಾಗಿರುವೆ.ಆದರೆ ಮೈತ್ರಿ ನಿರ್ಧಾರ ಹೊರಬಿದ್ದ ಬಳಿಕ ನನ್ನ ನಿರ್ಧಾರವೂ ಪ್ರಕಟವಾಗಲಿದೆ ಎಂದು ಸ್ಪಷ್ಟಪಡಿಸಿದರು.