ಬೆಂಗಳೂರು, ಏ.18 – ವಿದ್ಯಾರಣ್ಯಪುರದಲ್ಲಿ ಜೈ ಶ್ರೀರಾಮ್ ಎಂದವರಿಗೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರು ಮದ್ಯದ ಅಮಲಿನಲ್ಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ಈ ಸಂಬಂಧ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಂಧಿತ ನಾಲ್ವರು ಗಾಂಜಾ ಸೇವನೆ ಮಾಡಿಲ್ಲ, ಆದರೆ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಸಿಗ್ನಲ್‌ಗಾಗಿ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಹಿಂದೂ ಯುವಕರು ಶ್ರೀರಾಮನವಮಿ ಹಿನ್ನೆಲೆಯಲ್ಲಿ ʼಜೈ ಶ್ರೀರಾಂʼ ಘೋಷಣೆ ಕೂಗಿದ್ದರು.
ಈ ವೇಳೆ ಕ್ಯಾತೆ ತೆಗೆದ ಆರೋಪಿಗಳು, ಜೈಶ್ರೀರಾಂ ಕೂಗಬೇಡಿ, ಅಲ್ಲಾಹು ಅಕ್ಬರ್ ಮಾತ್ರ ಎಂದು ಹಲ್ಲೆ ನಡೆಸಿದ್ದು,ಹಲ್ಲೆ ಮಾಡುವುದು ನಮ್ಮ ಉದ್ದೇಶ ಆಗಿರಲಿಲ್ಲ ಎಂದು ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಕೃತ್ಯದ ಸಂಬಂಧ ಯಾವುದೇ ಪೂರ್ವ ಯೋಜನೆ ಹಾಕಿಕೊಂಡಿರಲಿಲ್ಲ,
ಎರಡು ಬೈಕ್‌ಗಳಲ್ಲಿ ಬರುತ್ತಿದ್ದಾಗ ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಈ ವೇಳೆ ಕಾರಿನಲ್ಲಿ ಮೂರ್ನಾಲ್ಕು ಯುವಕರು ಬಂದು ನಮ್ಮ ಬೈಕ್ ಪಕ್ಕ ನಿಲ್ಲಿಸಿದ ಕಾರಿನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಎಂದು ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸಿದರು. ಅದಕ್ಕೆ ನಾವು, ನೀವೇ ಅಲ್ಲಾ ಹೋ ಅಕ್ಬರ್ ಅಂತ ಕೂಗಿ ಅಂತ ಹೇಳಿದೆವು. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ. ಯಾವುದೇ ಬೇರೆ ಉದ್ದೇಶ ಇರಲಿಲ್ಲ” ಎಂದು ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ.
ಆರೋಪಿಗಳ ಹಿನ್ನೆಲೆಯನ್ನೂ ಪೊಲೀಸರು ಆಮೂಲಾಗ್ರವಾಗಿ ವಿಚಾರಿಸಿದ್ದು, ಯಾವುದೇ ಹಳೇಯ ಕೇಸ್‌ನಲ್ಲಿ ಇರುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೆಡಿಕಲ್ ಟೆಸ್ಟ್ ಮಾಡಿಸಲಾಗಿದ್ದು, ಗಾಂಜಾ ಸೇವನೆ ಬಗ್ಗೆ ಯಾವುದೇ ಮಾಹಿತಿ ದೃಡಪಟ್ಟಿಲ್ಲ. ಬದಲಾಗಿ ಆಲ್ಕೋಹಾಲ್ ಸೇವಿಸಿರುವುದು ಬಯಲಾಗಿದೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಈ ನಡುವೆ.ಇಂದು ಪ್ರಕರಣ ವಿರೋಧಿಸಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಬಿಗಿ ಭದ್ರತೆ ಹಾಕಲಾಗಿದೆ.