ಬೆಂಗಳೂರು, ಡಿ.18- ಹೊಸ ವರ್ಷವನ್ನು (New Year 2024) ಬರಮಾಡಿಕೊಳ್ಳುವ ಸಂಭ್ರಮಾಚರಣೆಗೆ ರಾಜಧಾನಿ ಬೆಂಗಳೂರು ಸಜ್ಜಾಗಿದೆ.ಈ ಸಂಭ್ರಮದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ಸಂಬಂಧ ಕೆಲವು ಮಾರ್ಗ ಸೂಚಿಗಳನ್ನು ಜಾರಿಗೆ ತರಲು ಭರದ ಸಿದ್ದತೆ ಕೈಗೊಂಡಿದ್ದಾರೆ.
ಸಂಭ್ರಮಾಚರಣೆಗಳು ಮುಗಿಲು ಮುಟ್ಟುವ ಎಂ.ಜಿ.ರೋಡ್, ಬಿಗ್ರೇಡ್, ಕೋರಮಂಗಲ, ಇಂದಿರಾನಗರ,ಹೆಚ್ ಎಸ್ ಆರ್ ಲೇಔಟ್ ಸೇರಿ ನಗರದ ಇನ್ನಿತರ ಕಡೆಗಳಲ್ಲಿ 9 ಸಾವಿರಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ನಿಯೋಜಿಸಲಾಗುತ್ತಿದೆ. ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ ರಸ್ತೆಯಲ್ಲಿ 5 ಮಂದಿ ಡಿಸಿಪಿ, 12 ಎಸಿಪಿ, 30ಕ್ಕೂ ಇನ್ ಸ್ಪೆಕ್ಟರ್ ಒಳಗೊಂಡಂತೆ 3 ಸಾವಿರ ಪೊಲೀಸರನ್ನು ಭದ್ರತೆಗೆ ಇರಲಿದ್ದಾರೆ.
ಹೊಸವರ್ಷದ (New Year 2024) ಮುನ್ನಾ ದಿನ ಸಂಜೆ 6 ರಿಂದ ಮರುದಿನ ಬೆಳಿಗ್ಗೆ 7 ರವರೆಗೆ ಎಲ್ಲಾ ಮೇಲ್ಸೇತುವೆಗಳನ್ನು ಬಂದ್ ಮಾಡಿ ವಾಹನ ತಪಾಸಣೆ ನಡೆಸಲಾಗುತ್ತದೆ,ಪಟಾಕಿ ಸಿಡಿಸುವುದು,ರಸ್ತೆಗಳಲ್ಲಿ ಗುಂಪು ಸೇರಿ ಪಾರ್ಟಿ ಮಾಡುವುದನ್ನು ನಿಷೇಧಿಸಲಾಗಿದೆ.
ಅಗತ್ಯವೆನಿಸಿದರೆ ಕೆಲವು ಕಡೆಗಳಲ್ಲಿ ನಿಷೇದಾಜ್ಞೆ ಜಾರಿಗೂ ಪೊಲೀಸರು ಮುಂದಾಗಿದ್ದಾರೆ. ವರ್ಷಾಚರಣೆ ಸಂಭ್ರಮಿಸಲು ಬರುವ ಜನರನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಆಯಕಟ್ಟಿನ ಜಾಗಗಳಲ್ಲಿ ಪಿಕೆಟಿಂಗ್ ಪಾಯಿಂಟ್, ವುಮೆನ್ ಸೇಫ್ಟಿ ಐಸ್ ಲ್ಯಾಂಡ್ ತೆರೆಯಲಾಗುವುದು. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗಾಗಿ ವಾಚ್ ಟವರ್ ನಿರ್ಮಿಸಲಾಗುವುದು.
ಡಿಸೆಂಬರ್ 31 ರಂದು ಬಿಗ್ರೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎಂಜಿ ರೋಡ್ ನ ಪ್ರವೇಶದ್ವಾರದಲ್ಲಿ ಮೆಟೆಲ್ ಡಿಟೆಕ್ಟರ್ ಉಪಕರಣ ಅಳವಡಿಸಲಾಗುವುದು. ಮಾಸ್ಕ್ ಧರಿಸಿದ್ದರೂ ಪ್ರವೇಶಿಸುವಾಗ ಮುಖ ಚಹರೆ ಪತ್ತೆಗಾಗಿ ಮಾಸ್ಕ್ ತೆಗೆಯಬೇಕು. ಅದೇ ರೀತಿ ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್ ಏರಿಯಾಗಳಲ್ಲಿ 2500 ಪೊಲೀಸರನ್ನು ನಿಯೋಜಿಸಿ ಹೆಚ್ಚುವರಿಯಾಗಿ 20 ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಇರಲಿದೆ.
ನಗರದ ವಿವಿಧ ಭಾಗಗಳಲ್ಲಿ ಹೊಸ ವರ್ಷದ ಆಚರಣೆಗೆ ಅನುಮತಿ ಕಡ್ಡಾಯವಾಗಿದ್ದು, ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿದೆ. ನಗರದ ಯಾವುದೇ ಸಾರ್ವಕನಿಕ ಹಾಗೂ ಬಹಿರಂಗ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಯಾರೂ ಕೂಡ ಹೊಸವರ್ಷ ಸ್ವಾಗತಿಸಲು ರಸ್ತೆಗೆ ಬರುವಂತಿಲ್ಲ. ಜನರು ರಸ್ತೆಗೆ ಬರುವುದನ್ನು ತಡೆಯಲು ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ.