ಬೆಂಗಳೂರು – ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಗಮನ ಸೆಳೆದಿದೆ. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟ ನಾಯಕರು ಇತರೆ ಪಕ್ಷಗಳ ಹಲವು ಮುಖಂಡರನ್ನು ಕಾಂಗ್ರೆಸ್ಸಿಗೆ ಕರೆತರಲು ಪ್ರಯತ್ನ ಆರಂಭಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರ ಈ ಪ್ರಯತ್ನಕ್ಕೆ ಇತರೆ ಪಕ್ಷಗಳ ನಾಯಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ನ ಕೆಲವು ನಾಯಕರು ಅಪಸ್ವರ ಎತ್ತಿದ್ದು ಹಿರಿಯ ನಾಯಕರ ಪ್ರಯತ್ನಕ್ಕೆ ಕೊಂಚಮಟ್ಟಿನ ಹಿನ್ನಡೆ ಉಂಟುಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕರಾಗಿ ಆರ್ ಅಶೋಕ್ ಅವರನ್ನು ನೇಮಕ ಮಾಡಿರುವ ವರಿಷ್ಠರ ಕ್ರಮದ ವಿರುದ್ಧ ಆಕ್ರೋಶಗೊಂಡು ಪಕ್ಷ ತೊರೆಯಲು ಸಜ್ಜಾಗಿರುವ ಹಿರಿಯ ನಾಯಕ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಕಾಂಗ್ರೆಸ್ಸಿಗೆ ಕರೆತರುವ ಪ್ರಯತ್ನಗಳು ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಗೃಹ ಮಂತ್ರಿ ಪರಮೇಶ್ವರ್, ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಸೋಮಣ್ಣ ಅವರನ್ನು ಕಾಂಗ್ರೆಸ್ ಕರೆತರಲು ತೀವ್ರ ಆಸಕ್ತಿ ವಹಿಸುತ್ತಿದ್ದಾರೆ ಈ ಸಂಬಂಧ ಸೋಮಣ್ಣ ಅವರೊಂದಿಗೆ ಹಲವು ಸುತ್ತಿನ ಮಾತು ಕಥೆಗಳು ನಡೆದಿದೆ. ಒಂದು ಮೂಲಗಳ ಪ್ರಕಾರ ಸೋಮಣ್ಣ ಅವರು ಕಾಂಗ್ರೆಸ್ಸಿಗೆ ಬರಲು ಸಮ್ಮತಿಸಿದ್ದು ಅವರಿಗೆ ಕೊಡುವ ಸ್ಥಾನಮಾನದ ಕುರಿತು ಚರ್ಚೆಗಳು ನಡೆದಿದೆ.
ಕಾಂಗ್ರೆಸ್ಸಿಗೆ ಬರುವ ಸೋಮಣ್ಣ ಅವರನ್ನು ತುಮಕೂರು ಲೋಕಸಭಾ ಅಥವಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡೆದಿದೆ.ಇದರ ಬೆನ್ನಲ್ಲೇ
ಸೋಮಣ್ಣ ಅವರ ರಾಜಕೀಯ ವಿರೋಧಿಯಾದ ಮಾಜಿ ಸಚಿವ ಎಂ ಕೃಷ್ಣಪ್ಪ ಮತ್ತು ಅವರ ಪುತ್ರ ಹಾಗೂ ಶಾಸಕ ಪ್ರಿಯಕೃಷ್ಣ ಅವರು ಇದೀಗ ಸೋಮಣ್ಣ ಅವರ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.
ಆರಂಭದಲ್ಲಿ ಸೋಮಣ್ಣ ಅವರನ್ನು ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಈ ಇಬ್ಬರು ಶಾಸಕರು ಇದೀಗ ತಮ್ಮ ಬಿಗಿ ನಿಲುವಿನಲ್ಲಿ ಕೊಂಚಮಟ್ಟಿಗೆ ರಿಯಾಯಿತಿ ತೋರಿಸಿದ್ದಾರೆ.
ಸೋಮಣ್ಣ ಅವರು ಕಾಂಗ್ರೆಸ್ಸಿಗೆ ಬರಲು ನಮ್ಮ ತಕರಾರು ಏನು ಇಲ್ಲ ಆದರೆ ಕಾಂಗ್ರೆಸ್ ಗೆ ಬಂದ ಮೇಲೆ ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಇವರ ಎಲ್ಲ ರೀತಿಯ ರಾಜಕೀಯ ಚಟುವಟಿಕೆಗಳು ಈ ಎರಡು ಕ್ಷೇತ್ರಗಳನ್ನು ಬಿಟ್ಟು ಬೇರೆ ಕಡೆ ನಡೆಯಬೇಕು ಯಾವುದೇ ಕಾರಣಕ್ಕೂ ಈ ಎರಡು ಕ್ಷೇತ್ರಗಳಲ್ಲಿ ಸೋಮಣ್ಣ ಅವರು ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳನ್ನು ನಡೆಸಬಾರದು ಅದರಲ್ಲೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ನಾವು ಮತ್ತು ನಮ್ಮ ಕಾರ್ಯಕರ್ತರ ಮಾತೆ ಅಂತಿಮವಾಗಬೇಕು ಹಾಗಿದ್ದರೆ ಮಾತ್ರ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು.ಇಂತಹ ಷರತ್ತುಗಳನ್ನು ಒಪ್ಪಿ ಅವರು ಕಾಂಗ್ರೆಸ್ ಗೆ ಬಂದಲ್ಲಿ ನಾವು ಅವರಿಗೆ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ನೀಡುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಇದನ್ನು ಮೀರಿ ಅವರು ಗೋವಿಂದರಾಜ ನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ವಿದ್ಯಮಾನಗಳ ಬಗ್ಗೆ ಮೂಗು ತೋರಿಸಿದರೆ ನಾವು ಬೇರೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಈ ಇಬ್ಬರು ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೃಷ್ಣಪ್ಪ ಮತ್ತು ಪ್ರಿಯಾ ಕೃಷ್ಣ ಅವರ ಅಭಿಪ್ರಾಯವನ್ನು ರಾಜ್ಯ ನಾಯಕರಿಗೆ ರಮಾನಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯವಾಗಿ ಎಚ್ಚರಿಕೆಯ ನಡೆ ಇಡುವಂತೆ ಸಲಹೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.