ಬೆಂಗಳೂರು,
ವಿಧಾನಮಂಡಲದ ಉಭಯ ಸದನಗಳಲ್ಲಿ ಶಾಸಕರು ಕೇಳಿದ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಗಳ ಕಾರ್ಯದರ್ಶಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟೀಸ್ ನೀಡಿದ್ದಾರೆ.
ಈ ಮೂಲಕ ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್. ವಿನೋತ್ ಪ್ರಿಯಾ,ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್ ರಾಜ್ ಕೆ.ಪಿ,ಸಾರಿಗೆ ಇಲಾಖೆ ಕಾರ್ಯದರ್ಶಿ-ಎನ್.ವಿ ಪ್ರಸಾದ್,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ- ಆರ್.ಗೀರಿಶ್,
ಲೋಕಪಯೋಗಿ ಇಲಾಖೆ ಕಾರ್ಯದರ್ಶಿ,ಅಮ್ಲಾನ್ ಆದಿತ್ಯ ಬಿಸ್ವಾಸ್ ,ಕಂದಾಯ ಇಲಾಖೆ-ರಾಜೇಂದರ್ ಕುಮಾರ್ ಕಟಾರಿಯಾ ಅವರಿಗೆ ನೋಟಿಸ್ ನೀಡಲಾಗಿದೆ.
ನೋಟೀಸ್ನಲ್ಲಿ ಕರ್ನಾಟಕ ವಿಧಾನಸಭೆಯ 16ನೇ ವಿಧಾನಸಭೆ ಯ 1ನೇ ಅಧಿವೇಶನದಿಂದ 9ನೇ ಅಧಿವೇಶನದವರೆಗೆ ಉತ್ತರ ಬಾರದಿರುವ ಕುರಿತು ಮುಖ್ಯಮಂತ್ರಿಗಳು ಮತ್ತು ಸಭಾಧ್ಯಕ್ಷರವರೊಂದಿಗೆ ಸೋಮವಾರ ಸಭೆ ನಡೆಸಲಾಗಿದೆ. ಸಕಾಲದಲ್ಲಿ ಉತ್ತರ ನೀಡದಿರುವ ಬಗ್ಗೆ ಮಾನ್ಯ ಸಭಾಪತಿಗಳು ತೀವು ಅಸಮಾಧಾನ ವ್ಯಕ್ತಪಡಿಸಿರುತ್ತಾರೆ ಎಂದಿದ್ದಾರೆ.
ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಇದುವರೆಗೂ ಉತ್ತರಗಳನ್ನು, ವಿಧಾನ ಮಂಡಲಕ್ಕೆ ಸಲ್ಲಿಸದ ಬಾಕಿ ಪ್ರಶ್ನೆಗಳ ವಿವರವನ್ನು ಇದರೊಂದಿಗೆ ಲಗತ್ತಿಸಿದೆ. ಈ ಸಂಬಂಧ ತಾವು ವೈಯಕ್ತಿಕವಾಗಿ ಗಮನಹರಿಸಿ, ಒಂದು ವಾರದೊಳಗಾಗಿ ವಿಧಾನ ಮಂಡಲಕ್ಕೆ ಉತ್ತರಗಳನ್ನು ಕಳುಹಿಸಿಕೊಡಲು ಸೂಚಿಸಿದೆ. ಈ ಅವಧಿಯೊಳಗೆ ಒಂದು ವೇಳೆ ಉತ್ತರವನ್ನು ಕಳುಹಿಸದೇ ಇದ್ದಲ್ಲಿ ಏಕೆ ಉತ್ತರವನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಸಿಎಂ ಪತ್ರ:
ಈ ನಡುವೆ, ವಿಧಾನ ಮಂಡಲ ಶಾಸಕರ ಪ್ರಶ್ನೆಗಳಿಗೆ ಸಕಾಲದಲ್ಲಿ ಉತ್ತರ ನೀಡದಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಸಚಿವರುಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕರ್ನಾಟಕ ವಿಧಾನಸಭೆಯ 16ನೇ ವಿಧಾನಸಭೆ (2023-2026)ಯ 1ನೇ ಅಧಿವೇಶನದಿಂದ 9ನೇ ಅಧಿವೇಶನದವರೆಗೆ ಉತ್ತರ ಬಾರದಿರುವ ಇಲಾಖಾವಾರು ಪ್ರಶ್ನೆಗಳ ಪಟ್ಟಿಯನ್ನು ಮತ್ತು ದಿನಾಂಕ: 16.03.2026 ರಂದು ನಡೆದ ಸದನ ಸಭೆಯಲ್ಲಿ 245 ಪ್ರಶ್ನೆಗಳಲ್ಲಿ ಇದುವರೆಗೂ 90 ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಒದಗಿಸಿರುವುದು ಕಂಡುಬಂದಿರುತ್ತದೆ ಎಂದು ವಿವರಿಸಿದ್ದಾರೆ.
ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸದೇ ಇರುವುದು ವಿಧಾನಸಭಾ ಸದಸ್ಯರುಗಳು ಸದನದಲ್ಲಿ ಚರ್ಚಿಸಲು ಅನಾನುಕೂಲತೆಯನ್ನು ಉಂಟು ಮಾಡಿರುತ್ತದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವುದರೊಂದಿಗೆ ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಸಭಾಧ್ಯಕ್ಷರು ತೀವ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ತಮ್ಮ ಇಲಾಖೆಯ ವತಿಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನ ಮಂಡಲಕ್ಕೆ ಕಳುಹಿಸದೇ ಇರುವ ಬಗ್ಗೆ ಇಲಾಖಾ ಕಾರ್ಯದರ್ಶಿಗಳ ವಿವರಣೆಯನ್ನು ತಕ್ಷಣ ನೀಡಲು ಸೂಚಿಸಲಾಗಿದೆ. ಅಲ್ಲದೇ,ಉತ್ತರ ಕಳುಹಿಸದ ಸಂದರ್ಭದಲ್ಲಿ ಸಂಬಂಧ ಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಿ ಹಾಗೂ ಮಾಹಿತಿ ಒದಗಿಸುವ ನಿರ್ಧಿಷ್ಟ ಸಮಯವನ್ನು ತಿಳಿಸುವಂತೆ ಸೂಚಿಸಿದ್ದಾರೆ.
ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್
Previous Articleಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕರು
Next Article ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

