ನವದೆಹಲಿ:
ಬದಲಾಗುತ್ತಿರುವ ಜಾಗತಿಕ ಯುದ್ಧದ ಸ್ವರೂಪಕ್ಕೆ ತಕ್ಕಂತೆ ಭಾರತೀಯ ಸೇನೆಯು ತನ್ನ ಶಕ್ತಿಯನ್ನು ಮರುಸಂಘಟಿಸುತ್ತಿದೆ. ತಂತ್ರಜ್ಞಾನ ಆಧಾರಿತ ಆಧುನಿಕ ಸವಾಲುಗಳನ್ನು ಎದುರಿಸುವ ರೀತಿಯಲ್ಲಿ ಸೇನೆ ಸಜ್ಜಾಗುತ್ತಿದೆ.
ತೋಳ್ಬಲ ಬುದ್ಧಿ ಶಕ್ತಿಯ ಜೊತೆಗೆ ತಂತ್ರಜ್ಞಾನದ ಶಕ್ತಿಯನ್ನು ಅಳವಡಿಸಿಕೊಂಡಿರುವ ‘ಭೈರವ’ ಎಂಬ ಅತ್ಯಾಧುನಿಕ ವಿಶೇಷ ಪಡೆಯನ್ನು ಭಾರತೀಯ ಸೇನೆ ಸಜ್ಜುಗೊಳಿಸಿದೆ.
ಆಧುನಿಕ ಯುದ್ಧದ ಸವಾಲುಗಳನ್ನು ಎದುರಿಸಲು ಸೇನೆಯು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡ್ರೋನ್ ಆಪರೇಟರ್‌ಗಳ ಬೃಹತ್ ತಂಡವನ್ನು ಭೈರವ ಹೆಸರಿನಲ್ಲಿ ನಿರ್ಮಿಸುವ ಮೂಲಕ ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಪಧಾತಿದಳದ ರೆಜಿಮೆಂಟ್‌ಗಳಿಂದ ಆಯ್ದ ಯೋಧರನ್ನು ಈ ವಿಶೇಷ ಪಡೆಗೆ ಸೇರಿಸಲಾಗಿದೆ.
ಈ ಪಡೆಯ ಪ್ರತಿಯೊಬ್ಬ ಸೈನಿಕನೂ ಡ್ರೋನ್‌ಗಳನ್ನು ನಿರ್ವಹಿಸುವಲ್ಲಿ ನಿಪುಣನಾಗಿದ್ದು, ಶತ್ರು ರಾಷ್ಟ್ರದ ಒಳಗಿನ ನೆಲೆಗಳನ್ನು ಗುರಿಯಾಗಿಸಲು ಮತ್ತು ಕಾರ್ಯಾಚರಣೆ ನಡೆಸಲು ಇವರಿಗೆ ವಿಶೇಷ ತರಬೇತಿ ನೀಡಲಾಗಿದೆ.
ಭಾರತೀಯ ಸೇನೆಯು ಹೊಸದಾಗಿ ರೂಪಿಸಿರುವ ‘ಭೈರವ’ ಬೆಟಾಲಿಯನ್, ಶತ್ರು ಪ್ರದೇಶದ ಒಳಗೆ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ದಾಳಿ ನಡೆಸುವ ಉನ್ನತ ಡ್ರೋನ್ ಆಧಾರಿತ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೊಂದಿದೆ.
ಈಗಾಗಲೇ ದೇಶಾದ್ಯಂತ ಇಂತಹ 15 ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು 25ಕ್ಕೆ ಏರಿಸುವ ಗುರಿಯನ್ನು ಸೇನೆ ಹೊಂದಿದೆ.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಪಡೆಯು, ಪ್ಯಾರಾ ಸ್ಪೆಷಲ್ ಫೋರ್ಸಸ್ ಮತ್ತು ಸಾಮಾನ್ಯ ಪದಾತಿ ದಳದ ನಡುವಿನ ಕಾರ್ಯಾಚರಣೆಯ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.
Previous Articleಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!
Next Article ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

