ಬೆಂಗಳೂರಿನಲ್ಲಿ ನ್ಯೂ ಇಯರ್ ಆಚರಣೆ ನಡೆದ ರೀತಿ ನೋಡಿದಿರಿ. ನ್ಯೂ ಇಯರ್ ಹಿಂದಿನ ದಿನ ಇರೋದೇ ಕುಡಿಯಲಿಕ್ಕೆ ಅನ್ನೋ ರೀತಿಯಲ್ಲಿ ಸರ್ಕಾರದಿಂದ ಹಿಡಿದು ಪತ್ರಿಕೆಯವರನ್ನು ಒಳಗೊಂದು ಸೋಶಿಯಲ್ ಮೀಡಿಯಾ ದಲ್ಲಂತೂ ಬಿಂಬಿತವಾಯಿತು. ಸರ್ಕಾರವೂ ಕುಡಿದರೆ ಪರವಾಗಿಲ್ಲ ಸರಿಯಾಗಿ ನಡೆದುಕೊಳ್ಳಿ, ಸರಿಯಾಗಿ ನಡೆದುಕೊಳ್ಳದಿದ್ದರೂ ಪರವಾಗಿಲ್ಲ ಪೊಲೀಸರಿರೋದೇ ಕುಡುಕರನ್ನ ನೋಡಿಕೊಳ್ಳಲಿಕ್ಕೆ ಹೇಗೆ ಬೇಕಾದರೂ ನಡೆದುಕೊಳ್ಳಿ ಆದರೆ ಕುಡಿದು ವಾಹನ ಚಲಾಯಿಸೋದು ಮತ್ತು ಹುಡುಗಿಯರಿಗೆ ತೊಂದರೆ ಕೊಡೋದು ಇವೆರಡನ್ನು ಮಾಡಬೇಡಿ ಅಂತ ಹೇಳಿಬಿಟ್ಟಿತು. ಕುಡಿಯೋದೇ ಗಮ್ಮತ್ತು, ಯುವಕ ಯುವತಿಯರು ಕುಡೀತಾರೆ, ಎಷ್ಟು ಮದ್ಯ ಮಾರಾಟವಾಗ್ತದೆ, ಎಷ್ಟು ಲಾಭ ಬರುತ್ತೆ, ಜನ ಎಲ್ಲೆಲ್ಲಾ ಕುಣೀತಾರೆ ಹೇಗೆಲ್ಲಾ ಕುಣೀತಾರೆ ಅಂತ ಹೇಳಿ ಹೇಳಿ ಕುಡಿಯದವರೂ ಕೂಡ ಒಂದು ಪೆಗ್ ಕುಡಿದೇ ಬಿಡೋಣ, ಯೌವನ ಅಂದ ಮೇಲೆ ಕುಡೀಬೇಕು ನ್ಯೂ ಇಯರ್ ಅಂದಮೇಲೆ ಒಂದು ಪೆಗ್ ಏರಿಸಲೇಬೇಕು ಎನ್ನುವ ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ನಮ್ಮ ಮಾಧ್ಯಮಗಳು ಸೋಶಿಯಲ್ ಮೀಡಿಯಾ ಮತ್ತು ಜನ ಕೂಡ ಹೇಳುತ್ತಾ ಜನರ ಮೇಲೆ ಮಾನಸಿಕ ಮತ್ತು ಸಾಮಾಜಿಕ ಒತ್ತಡ ಹೇರಿ ಮಾಡಬಾರದ್ದನ್ನ ಮಾಡಿಸಿಬಿಡುತ್ತಾರೆ.
ಅದೂ ಅಲ್ಲದೆ ಮದ್ಯಕ್ಕೆ ಎಣ್ಣೆ ಅಂತ ಹೆಸರಿಟ್ಟು ಎಣ್ಣೆ ಹೊಡಿಯೋದು ಅಂತೆಲ್ಲ ಮಾಧ್ಯಮದಲ್ಲೂ ಹೇಳಿ ಕುಡಿಯೋದು ಒಂದು ದೊಡ್ಡ ಖುಷಿಯ ವಿಷಯ, ಕುಡುಕತನ ತಮಾಷೆಯ ವಿಷಯ ಅಂತೆಲ್ಲ ಅನ್ನಿಸೋ ರೀತಿ ಮಾತಾಡ್ತಾರೆ. ಆದರೆ ಕುಡಿತ ಒಂದು ಸಲ ಮಾಡಿ ಬಿಡುವಂಥ ಚಟವಲ್ಲ. ನ್ಯೂ ಇಯರ್ ಗೆ ಒಂದು ಸಲ ಕುಡಿದ ಮೇಲೆ ಅನೇಕರು ವರ್ಷ ಪೂರ್ತಿ ಕುಡೀತಾರೆ. ಕುಡಿದ ಮೇಲೆ ಅನೇಕರು ಹೇಗೇಗೆಲ್ಲಾ ಆಡುತ್ತಾರೆ, ಹೇಗೆ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ, ಮೈ ಮೇಲೆ ಪ್ರಜ್ಞೆ ಇಲ್ಲದೆ ಮನ ಮರ್ಯಾದೆ ಬಿಟ್ಟು ವರ್ತಿಸುತ್ತಾರೆ, ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ, ಕೆಲವರು ರಸ್ತೆಯಲ್ಲೇ ಮಲಗಿಬಿಡುತ್ತಾರೆ, ಮತ್ತು ಅದೆಲ್ಲ ವಿಡಿಯೋಗಳಲ್ಲಿ ದಾಖಲಾಗಿ ಕುಡಿದವರು ಅಜರಾಮರರಾಗಿಬಿಡುತ್ತಾರೆ. ಇದೆಲ್ಲ ಕಂಡೂ ನೋಡಿಯೂ ಕುಡಿಯೋದು ಒಂದು ದೊಡ್ಡ ಸಾಧನೆ ಅನ್ನೋ ರೀತಿಯಲ್ಲಿ ಯುವಜನರ ದಾರಿತಪ್ಪಿಸುವಲ್ಲಿ ಎಲ್ಲರೂ ಪಾತ್ರವಹಿಸುತ್ತಾರೆ.
ಆದರೆ ಈ ನ್ಯೂ ಇಯರ್ ಆಚರಿಸಲು ಮೊದಲು ಆರಂಭಿಸಿದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ್ತು ಬಿಳಿಯರ ನಾಡುಗಳಲ್ಲೇ ಈಗ ನ್ಯೂ ಇಯರ್ ಅನ್ನು ಮದ್ಯ ವಿಲ್ಲದೆ ಆಚರಿಸುವ ಸಂಸ್ಕೃತಿ ಆರಂಭವಾಗಿದೆ. ಈ ರೀತಿಯ ಆಚರಣೆ ಎಲ್ಲಾ ಕಡೆ ಹಬ್ಬುತ್ತಿದೆ ಕೂಡ. ಕುಣಿತ ಮೋಜು, ಉಲ್ಲಾಸ ಆಟ ಊಟ ಹಣ್ಣಿನ ಜೂಸ್ ಇತ್ಯಾದಿಗಳೊಂದಿಗೇ ಖುಷಿಯಾಗಿ ನ್ಯೂ ಇಯರ್ ಆಚರಿಸುವ ಪರಿಪಾಠ ಆರಂಭವಾಗಿದೆ. ಮದ್ಯ ರಹಿತ ಪಾರ್ಟಿ ಎನ್ನುವ ಹೊಸ ಸಂಪ್ರದಾಯ ಆರಂಭವಾಗಿದೆ. ಪಾರ್ಟಿ ಮಾಡಲಿಕ್ಕೆ ಮದ್ಯದ ಅವಶ್ಯಕತೆ ಇಲ್ಲ ಎನ್ನುವುದಕ್ಕೆ ಹೆಚ್ಚಾಗಿ ಯುವಜನರು ಆಸಕ್ತಿ ತೋರಿಸುತ್ತಿದ್ದಾರೆ ಅಂತ ವರದಿಯಾಗಿದೆ. ಭಾರತದಲ್ಲೂ ಅನೇಕ ಕಡೆ ಯುವಜನರು ಭಜನಾ ಪಾರ್ಟಿಗಳು, ಸತ್ಸಂಗ ಪಾರ್ಟಿಗಳು ಆತ ಆಡುತ್ತಾ ಪಾರ್ಟಿ ಮಾಡುವುದು ಹಾಡುತ್ತಾ ಮೋಜು ಮಾಡುವುದು ಮತ್ತು ಖುಷಿಯಾಗಿ ಮಾತುಕತೆ ನಡೆಸುತ್ತಾ ಪಾರ್ಟಿ ಮಾಡುವ ದಾರಿಗಳನ್ನು ಕಂಡುಕೊಂಡಿದ್ದಾರೆ.
ಸರ್ಕಾರ ಕೂಡ ಮದ್ಯದಿಂದ ಬರುವ ತೆರಿಗೆ ಲಾಭಕ್ಕಾಗಿ ಮದ್ಯ ಸೇವನೆಯನ್ನು ಪ್ರೋತ್ಸಾಹಿಸಿ ಯುವಜನರ ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ನಿರ್ಲಕ್ಷ್ಯ ತೋರುವುದು ಯಾವ ಸರ್ಕಾರಕ್ಕೂ ಶೋಭೆ ತರುವಂಥದ್ದಲ್ಲ. ಕಂಠ ಪೂರ್ತಿ ಕುಡಿದು ಹುಚ್ಚೆದ್ದು ಕುಣಿದು ಅಸಹ್ಯಕರವಾಗಿ ವರ್ತಿಸುವುದೇ ಪಾರ್ಟಿ ಎನ್ನುವುದನ್ನು ಮಾಧ್ಯಮದವರು ಮೊದಲು ನಿಲ್ಲಿಸಬೇಕು. ಮದ್ಯವಿಲ್ಲದೆ ಹೇಗೆ ಯುವಜನತೆ ಪಾರ್ಟಿ ಮಾಡಿ ಖುಷಿ ಪಡುತ್ತಿದ್ದಾರೆ, ಅದೂ ಮುಂದುವರೆದ ರಾಷ್ಟ್ರಗಳಲ್ಲಿ, ಎನ್ನುವುದನ್ನು ತೋರಿಸಿ ಕೊಂಚ ಸಮಾಜಮುಖಿಯಾಗಿ ಮಾಧ್ಯಮದವರೂ ಕೆಲಸ ಮಾಡಲಿ.
