ಬೆಂಗಳೂರು,ಅ.10:
ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಹಾಗೂ ವಿನಯ ಕುಲಕರ್ಣಿ ನೀಡಿರುವ ಪ್ರತಿ ದೂರಿನ ಕುರಿತ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ರೈತ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ತಮ್ಮನ್ನು ಪರಿಚಯ ಮಾಡಿಕೊಂಡ ವಿನಯ ಕುಲಕರ್ಣಿ ಅವರು ತಮ್ಮ ಜೊತೆಯಲ್ಲಿ ಸ್ನೇಹದಿಂದ ವರ್ತಿಸುತ್ತಿದ್ದು ಆನಂತರ ಅತ್ಯಾಚಾರವೆಸಗಿದರು ಎಂದು ಆರೋಪಿಸಿ ಹಾವೇರಿ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಮೇಲೆ ಅತ್ಯಾಚಾರವೆಸಗಿದ ವಿನಯ ಕುಲಕರ್ಣಿ ಈ ವಿಷಯವನ್ನು ಎಲ್ಲಿಯೂ ಬಾಯಿ ಬಿಡದಂತೆ ಎಚ್ಚರಿಕೆ ನೀಡಿದ್ದರು ಅಲ್ಲದೆ ವಿಷಯ ಬಹಿರಂಗಗೊಂಡರೆ ತಮ್ಮನ್ನು ಮುಗಿಸಿಬಿಡುವುದಾಗಿ ಬೆದರಿಕೆ ಹಾಕಿದ್ದರು ಹೀಗಾಗಿ ಅಂದು ಆ ವಿಷಯ ಹೇಳಿರಲಿಲ್ಲ ಎಂದು ಹೇಳಿದ ಮಹಿಳೆ ಖಾಸಗಿ ವಾಹಿನಿಯಲ್ಲಿ ಕುಳಿತು ತಮಗಾದ ಅನುಭವವನ್ನು ವಿವರಿಸಿದ್ದರು ಇದಾದ ಬಳಿಕ ಅವರು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ವಿನಯ ಕುಲಕರ್ಣಿ ವಿರುದ್ಧ ದೂರು ಸಲ್ಲಿಸಿದ್ದರು.
ಇದಾದ ಮರುಕ್ಷಣದಲ್ಲಿ ಶಾಸಕ ವಿನಯ ಕುಲಕರ್ಣಿ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ವಿನಾಕಾರಣ ದೂರುದಾರೆ ಮಹಿಳೆ ಹಾಗೂ ಸುದ್ದಿವಾಹಿನಿಯೊಂದರ ಮುಖ್ಯಸ್ಥರೊಬ್ಬರು ನನಗೆ ಕರೆ ಮಾಡಿ, ತಮಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಎಂದು ಹೆದರಿಸಿ 2 ಕೋಟಿ ರೂ.ಗೆ ಬ್ಲ್ಯಾಕ್ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಎರಡೂ ದೂರುಗಳನ್ನು ಸ್ವೀಕರಿಸಿರುವ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದರು. ಈ ನಡುವೆ ಸರ್ಕಾರ ಈ ಎರಡೂ ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಿದ್ದು, ಸಿಐಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.