ಬೆಂಗಳೂರು,ಮಾ.17- ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು , ದಾಖಲೆ ಸೃಷ್ಟಿಸುವ ತವಕದಲ್ಲಿರುವ ಬಿಜೆಪಿಗೆ ಪಕ್ಷದೊಳಗೆ ಎದ್ದಿರುವ ಭಿನ್ನಮತ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಬೆಳಗಾವಿ ಹಾವೇರಿ ಶಿವಮೊಗ್ಗ ತುಮಕೂರು ಮೈಸೂರು ಬೆಂಗಳೂರು ದಾವಣಗೆರೆ ಸೇರಿದಂತೆ ಹಲವು ಕಾಣಿಸಿಕೊಂಡಿರುವ ಭಿನ್ನಮತ ನಾಯಕತ್ವಕ್ಕೆ ದೊಡ್ಡ ಸವಾಲು ತಂದೊಡ್ಡಿದೆ ಈ ಬಿಕ್ಕಟ್ಟನ್ನು ಬಗೆಹರಿಸುವಂತೆ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪಕ್ಷದ ತೀರ್ಮಾನದ ವಿರುದ್ಧ ಬಂಡಾಯ ಸಾರಿರುವ ನಾಯಕರ ಜೊತೆ ಮಾತುಕತೆ ನಡೆಸಲು ಯತ್ನಿಸಿದರಾದರೂ ಅನೇಕರು ಇದಕ್ಕೆ ಸ್ಪಂದಿಸದೆ ಇರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಬೆಳಗಾವಿ ಎಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ನಿರ್ಧಾರದ ವಿರುದ್ಧ ಮಾಜಿ ಸಂಸದ ಪ್ರಭಾಕರ ಕೋರೆ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಬಂಡಾಯ ಸಾರಲು ಸಜ್ಜುಗೊಂಡಿದ್ದಾರೆ. ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ಈ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಶೆಟ್ಟರ್ ಅಭ್ಯರ್ಥಿಯೆಂದು ಹೆಸರು ಘೋಷಣೆಗೂ ಮುನ್ನವೇ ಕಾಣಿಸಿಕೊಂಡಿರುವ ಈ ಅಪಸ್ವರ ನಾಯಕತ್ವಕ್ಕೆ ಸವಾಲು ತಂದೊಡ್ಡಿದೆ ಪ್ರಮುಖವಾಗಿ ಪಕ್ಷದ ಶಾಸಕರಾದ ಅಭಯ ಪಾಟೀಲ್, ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿರುವುದು ಹೈಕಮಾಂಡ್ ಚಿಂತೆಗೆ ಕಾರಣವಾಗಿದೆ.
ಶೆಟ್ಟರ್ ಸ್ಪರ್ಧೆಗೆ ಆಪಸ್ವರ ಎತ್ತುತ್ತಿರುವ ಎಲ್ಲರೊಂದಿಗೆ ಮಾತನಾಡಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸೂಚನೆ ನೀಡಿದೆ.
ಮತ್ತೊಂದೆಡೆ, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನಕ್ಕೆ ಹಲವರು ಮುಂದಾಗಿದ್ದಾರೆ ಅದರಲ್ಲೂ
ಭಿನ್ನಮತವನ್ನು ಶಮನ ಮಾಡಲು ದಾವಣಗೆರೆಗೆ ತೆರಳಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ಭೈರತಿ ಬಸವರಾಜ್ ಆಗಮಿಸಿದ್ದರೂ ಟಿಕೆಟ್ ವಂಚಿತರ ಸಂಧಾನ ನಡೆಸುವ ಪ್ರಯತ್ನ ಕೈಗೂಡಲಿಲ್ಲ. ಪ್ರಮುಖರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಕರುಣಾಕರ ರೆಡ್ಡಿ ಸೇರಿದಂತೆ ಅನೇಕರು ಪಕ್ಷದಿಂದ ದೂರ ಉಳಿದಿದ್ದಾರೆ.
ತುಮಕೂರಿನಲ್ಲಿ ಬಂಡಾಯ ಸಾರಿರುವ ಮಾಧುಸ್ವಾಮಿ ಅವರ ಜೊತೆಗೆ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಬಿಕ್ಕಟ್ಟು ಬಗೆಹರಿಸುವ ಪ್ರಯತ್ನ ನಡೆಸಿದರೂ ಅದು ಫಲ ನೀಡಿಲ್ಲ
ಚಿಕ್ಕಮಗಳೂರು, ಉಡುಪಿಯಲ್ಲೂ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಟಿ.ರವಿ ಮುನಿಸಿಕೊಂಡಿರುವುದು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲೂ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಟಿಕೆಟ್ ಸ್ಪರ್ಧೆ ಏರ್ಪಟ್ಟಿದೆ.
ಈಶ್ವರಪ್ಪ ಬಿಗಿಪಟ್ಟು:
ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬಂಡಾಯ ತಲೆ ನೋವಾಗಿ ಪರಿಣಮಿಸಿದೆ. ಮುನಿಸು ಮರೆತು ನಾಳೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಿರಿಯ ನಾಯಕರು ಈಶ್ವರಪ್ಪ ಅವರಿಗೆ ಮನವಿ ಮಾಡಿದರೂ ಅದಕ್ಕೆ ಅವರು ಸೊಪ್ಪು ಹಾಕಿಲ್ಲ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ ಅಗರವಾಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಒಳಗೊಂಡ ಪಕ್ಷದ ನಿಯೋಗ ಈಶ್ವರಪ್ಪ ಅವರ ಮನೆಗೆ ಆಗಮಿಸಿ ಮನವೊಲಿಸಲು ಸಭೆ ನಡೆಸಲಾಯಿತು. ಆದರೆ, ಇದಕ್ಕೆ ಜಗ್ಗದ ಈಶ್ವರಪ್ಪ, ಸಭೆಯ ಮಧ್ಯದಲ್ಲಿಯೇ ಬೇರೆ ಕಾರ್ಯಕ್ರಮದ ನಿಮಿತ್ತ ಎದ್ದು ತೆರೆಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಮಾ.18ಕ್ಕೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ’ಎಂದು ಹೇಳಿದರು.
ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರೂ ಅವರ ಹೆಸರು ಹೇಳುವುದನ್ನು ಬಿಡುವುದಿಲ್ಲ. ಆದರೆ, ಏಕ ಕುಟುಂಬದ ಕಪಿಮುಷ್ಠಿಯಿಂದ ಪಕ್ಷವನ್ನು ಬಿಡುಗಡೆ ಮಾಡಬೇಕು ಎನ್ನುವ ಉದ್ದೇಶದಿಂದ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಮೋದಿ ಬಳಿ ಹೋಗುವೆ. ಕಾರ್ಯಕ್ರಮಕ್ಕೆ ತೆರಳದಿರುವ ಕುರಿತ ದುಃಖವಿದೆ’ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಯಡಿಯೂರಪ್ಪ ಅವರು ಸಂಧಾನಕ್ಕಾಗಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸಿದ್ದರು. ನಾನು ಅವರ ಸಂಧಾನಕ್ಕೆ ಒಪ್ಪಿಲ್ಲ. ನನ್ನ ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಮಾತ್ರವಲ್ಲ, ನನಗೆ ಯಡಿಯೂರಪ್ಪ ಕುಟುಂಬದವರು ಮೋಸ ಮಾಡಿದ್ದಾರೆ’ ಎಂದು ದೂರಿದರು.
ಯಡಿಯೂರಪ್ಪ ಹಾಗೂ ಅವರ ಪುತ್ರರ ಕೈಯಿಂದ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪ ಅವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ಪಕ್ಷ ನಿಷ್ಠೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರದೇ ರಾಜ್ಯಭಾರವಾಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ’ ಎಂದು ಆರೋಪಿಸಿದರು.