ಬೆಂಗಳೂರು – ಲೋಕಸಭಾ (Lok Sabha Security Breach) ಕಲಾಪ ನಡೆಯುತ್ತಿರುವ ವೇಳೆಯೇ ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ ಇಬ್ಬರು ಆಗಂತುಕರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು. ಅದರಲ್ಲಿ ಒಬ್ಬ ಸಂಸದರು ಕುಳಿತುಕೊಳ್ಳುವ ಮೇಜುಗಳ ಮೇಲೆಯೇ ಓಡುವ ದೃಶ್ಯ ಲೋಕಸಭೆಯ ಕಲಾಪದ ವಿಡಿಯೊದಲ್ಲಿ ದಾಖಲಾಗಿದೆ.
ಲೋಕಸಭಾ ಕಲಾಪ ವೀಕ್ಷಣೆಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 1ರ ಸುಮಾರಿಗೆ ಏಕಾಏಕಿ ಸದನದೊಳಗೆ ನುಗ್ಗಿ, ಹಳದಿ ಬಣ್ಣದ ಹೊಗೆ ಸಿಂಪಡಿಸಿ, ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದರು. ಇವರನ್ನು ಇದೀಗ ಬಂಧಿಸಲಾಗಿದೆ.ಇಬ್ಬರಿಗೂ ಕಲಾಪ ವೀಕ್ಷಿಸಲು ಮೈಸೂರಿನ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಲು ಶಿಫಾರಸು ಮಾಡಿದ್ದಾರೆ.
ಹೀಗಾಗಿ ಇವರು ಯಾರು ಎಂಬ ಹುಡುಕಾಟ ನಡೆದಿದ್ದು ಸಾಗರ್ ಶರ್ಮಾ ಉತ್ತರ ಪ್ರದೇಶದವರಾದರೆ ,ಮತ್ತೊಬ್ಬ ಮನೋರಂಜನ್, ಮೈಸೂರಿನವರು.
34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿಯಾಗಿರುವ ದೇವರಾಜೇ ಗೌಡ ಅವರ ಪುತ್ರ.ಇವರು ಮೂಲತಃ ಹಾಸನ ಜಿಲ್ಲೆ ಅರಕಲಗೂಡಿನ ಮಲ್ಲಾಪುರ ಗ್ರಾಮದವರು.ವೃತ್ತಿಯಲ್ಲಿ ಕೃಷಿಕರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ
ಬಿ.ಇ.ಪದವೀಧರನಾಗಿರುವ ಮನೋರಂಜನ್, ಮೈಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದು ಮನೆಯಲ್ಲಿದ್ದರು.
ಸುದ್ದಿ ಹೊರಬೀಳುತ್ತಿದ್ದಂತೆ,ವಿಜಯನಗರದ 2ನೇ ಹಂತದಲ್ಲಿರುವ ನಿವಾಸಕ್ಕೆ ವಿಜಯನಗರ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಅವರ ತಂದೆ ದೇವರಾಜೇ ಗೌಡ ಅವರಿಂದ ಮಗನ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮನೆಯಲ್ಲಿ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ. ಕೆಲವೊಂದು ಭೂಗತ ಜಗತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟದ ಕಥನಗಳು ಇಲ್ಲಿವೆ. ಮನೋರಂಜನ್ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಹೊಂದಿದ್ದರು ಎನ್ನುವುದು ಅವರ ಓದಿನಿಂದ ಗೊತ್ತಾಗುತ್ತಿದೆ.
ತಮ್ಮ ಪುತ್ರನ ಕುರಿತಂತೆ, ದೇವರಾಜೇ ಗೌಡ ಮಾಧ್ಯಮದೊಂದಿಗೆ ಮಾತನಾಡಿ, ‘ಸಮಾಜದ ಬಗ್ಗೆ ಒಲವು ಹೊಂದಿದ್ದ. ನೊಂದವರಿಗೆ ಸಹಾಯ ಮಾಡಬೇಕೆಂಬ ಮನೋಭಾವವಿತ್ತು. ಮನೆಯಲ್ಲಿದ್ದ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದ. ಆಗಾಗ ದೆಹಲಿ, ಬೆಂಗಳೂರಿಗೆ ತೆರಳುತ್ತಿದ್ದ. ತಪ್ಪು ಮಾಡಿದ್ದರೆ ಗಲ್ಲುಶಿಕ್ಷೆಯಾಗಲಿ’ ಎಂದರು.