ಬೆಳಗಾವಿ,ಡಿ.11-ರಾಜ್ಯದ ಜನತೆ ಜೆಡಿಎಸ್ ನ್ನು ಜನ ಹೀನಾಯವಾಗಿ ಸೋಲಿಸಿರುವುದರಿಂದ ಹತಾಶರಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಪಿಸಿದರು.
50 ಶಾಸಕರೊಂದಿಗೆ ಕಾಂಗ್ರೆಸ್ ನ ಪ್ರಭಾವಿ ಸಚಿವರೊಬ್ಬರು ಪ್ರಯತ್ನ ನಡೆಸಿ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಕಾಂಗ್ರೆಸ್ ನ ಯಾವೊಬ್ಬ ಶಾಸಕರು ಬಿಜೆಪಿಗೆ ಹೋಗಲಾರರು ಎಂದು ಸ್ಪಷ್ಟಪಡಿಸಿದರು.
ಸುವರ್ಣ ಸೌಧದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಚ್ ಡಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿ ಇದ್ದು ಗೌರವಯುತವಾಗಿ ಜನರ ಕೆಲಸ ಮಾಡಬೇಕು ಎಂದರು.
ರಾಜ್ಯದ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ,
ಅದನ್ನು ಸಹಿಸದ ಕುಮಾರಸ್ವಾಮಿ ಅವರು ಜನರ ತೀರ್ಪು ಗೌರವಿಸದೇ ಅಧಿಕಾರ ಇಲ್ಲದೇ ಇರಲಾಗದೇ ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು .
ಸರ್ಕಾರ ಪತನ ಮಾಡಬೇಕು ಎಂಬುದು ಅವರ ರಾಜಕಾರಣ ಆದರೆ ಏನು ಹೇಳಬೇಕು,ಕಳೆದ ಚುನಾವಣೆಯಲ್ಲಿ ಏನಾಗಿದೆ ಎಂದು ತಿಳಿದುಕೊಂಡು ಹೆಜ್ಜೆ ಇಡಲಿ ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ
ಎಂದು ಹೇಳಿದರು.
ಯಾವುದೇ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ,ಅದಕ್ಕೆ ಕಾದು, ಸರ್ಕಾರ ಬೀಳಿಸುವುದು ಒಂದೇ ಉದ್ದೇಶ ಕುಳಿತರೆ ರಾಜಕಾರಣ ಅಷ್ಟೇನಾ?
ವಿರೋಧ ಪಕ್ಷದ ಜವಾಬ್ದಾರಿಯನ್ನು ಅವರು ನಿಭಾಯಿಸಲಿ ಎಂದು ತಿರುಗೇಟು ನೀಡಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಎಚ್ ಡಿ ಕೆ ಹೊಗಳಿದ ವಿಚಾರವಾಗಿ ಮಾತನಾಡಿದ ಅವರು
ಅದು ವೈಯಕ್ತಿಕ ರಾಜಕಾರಣ, ಅವರಿಗೆ ಅನಿವಾರ್ಯ ಆಗಿರಬಹುದು,ತಮ್ಮ ಶಕ್ತಿ ಕಡಿಮೆಯಾಗಿದೆ, ಶಕ್ತಿ ವೃದ್ಧಿಗೊಳಿಸಲು ಹೀಗೆ ಮಾಡಿರಬಹುದು ಎಂದರು.