ಬೆಂಗಳೂರು, ಏ.30- ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸದ್ದು ಮಾಡತೊಡಗಿದೆ.ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ಕುರಿತು ಸಮಗ್ರ ವರದಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪ್ರಕರಣ ಹೇಗೆ ಬೆಳಕಿಗೆ ಬಂದಿತು, ಯಾವ ರೀತಿಯ ತನಿಖೆ ನಡೆಸಲಾಗುತ್ತದೆ ಎನ್ನುವುದು ಸೇರಿದಂತೆ ಸಂಪೂರ್ಣ ವರದಿಯನ್ನು ಮೂರು ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ( ಡಿಜಿ-ಐಜಿಪಿ) ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿದೆ.
ಮಹಿಳಾ ಆಯೋಗ ಡಿಜಿ-ಐಜಿಪಿ ಮತ್ತು ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ವಿಡಿಯೋಗಳು ವೈರಲ್ ಆಗದಂತೆ ತಡೆಯಿರಿ. ವಿಡಿಯೋ ಲೀಕ್ ಆಗಿದ್ದು ಎಲ್ಲಿಂದ? ಲೀಕ್ ಮಾಡಿದ್ದು ಯಾರು? ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರ ಬರೆದಿದೆ.
ಕ್ರಮ ಕೈಗೊಳ್ಳಿ:
ಈ ನಡುವೆ, ಈ ವಿಷಯವಾಗಿ ರಾಜ್ಯ ಮಹಿಳಾ ಆಯೋಗ ಕೂಡ ಮಧ್ಯ ಪ್ರವೇಶ ಮಾಡಿದ್ದು ಸಂತ್ರಸ್ತ ಮಹಿಳೆಯರ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಈ ಪತ್ರ ಬರೆದಿದ್ದು,
ಸಾಮಾಜಿಕ ತಾಲತಾಣಗಳಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ ವಿಡಿಯೋಗಳನ್ನು ಹಂಚಲಾಗುತ್ತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಸಂತ್ರಸ್ತ ಮಹಿಳೆಯ ಕುಟುಂಬದಲ್ಲೂ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಈ ಬಗ್ಗೆ ಸಾಕಷ್ಟು ಮಹಿಳೆಯರಿಂದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಸಂತ್ರಸ್ತ ಮಹಿಳೆಯರ ವಿಡಿಯೋ ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಹರಿಯಬಿಡುವ ಮೂಲಕ ಅನ್ಯಾಯಕ್ಕೊಳಗಾದ ಮಹಿಳೆಯರ ಘನತೆಗೆ ಕುಂದು ತರುತ್ತಿದ್ದಾರೆ. ಇದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಆಗಿರುವುದರಿಂದ ನಾವು ಕಾಯಬೇಕು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬರುವ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡೋದು, ತನಿಖೆಯಲ್ಲಿ ಭಾಗಿಯಾದಾಗ ರಕ್ಷಣೆ ಕೊಡಿಸುವುದು ಮಹಿಳಾ ಆಯೋಗದ ಜವಾಬ್ದಾರಿಯಾಗಿದೆ. ಈ ಭರವಸೆಯನ್ನು ನಾನು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದರು.

