ಬೆಂಗಳೂರು, ಏ.30- ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಬಿಜೆಪಿ ತನ್ನ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.
ಪ್ರಜ್ಞಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ್‌ಗೌಡ ಕಾರ್ಯಕರ್ತರೊಂದಿಗೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಲ ಕಾರ್ಯಕರ್ತರು ಪಕ್ಷದ ಕಾರ್ಯಾಲಯದ ಒಳಗೆ ನುಸುಳಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ಹಂತದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ-ನೂಕಾಟ ನಡೆಯಿತು. ನಂತರ ಪೊಲೀಸರು ಯುವ ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಬಿ.ವಿ.ಶ್ರೀನಿವಾಸ್, ಪ್ರಧಾನಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಾರೆ. ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರಧಾನಿಯವರು ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜೆಡಿಎಸ್ ಕಿಡಿ:
ಈ ನಡುವೆ ಬಿಜೆಪಿ ಕಚೇರಿ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಆನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಸುದೀಪ್ ಅವರೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಪೆನ್ ಡ್ರೈವ್ ಬಹಿರಂಗಪಡಿಸಿದವರ ಬಗ್ಗೆಯೂ ಚರ್ಚೆಯಾಗಬೇಕು ಮಹಾ ನಾಯಕ ಉಪಮುಖ್ಯಮಂತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಪ್ರಕರಣದಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ನೀವೇ ತನಿಖೆ ನಡೆಸುತ್ತಿದ್ದೀರಿ ಹೀಗಿದ್ದರೂ ಪ್ರಧಾನಿ ಮೋದಿ ಅವರನ್ನು ಪ್ರಕರಣದಲ್ಲಿ ಯಾಕೆ ಎಳೆದು ತರುತ್ತೀರಿ ಬಿಜೆಪಿ ಕಚೇರಿ ಮುಂದೆ ಯಾಕೆ ಪ್ರತಿಭಟನೆ ಮಾಡುತ್ತೀರಿ ಪೆನ್ ಡ್ರೈವ್ ಬಹಿರಂಗ ಪಡಿಸಿದ ಮಹಾನ್ ನಾಯಕನ ಮನೆಯ ಮುಂದೆ ಪ್ರತಿಭಟನೆ ನಡೆಸಿ ಎಂದು ಕಿಡಿ ಕಾರಿದರು.