ಬೆಂಗಳೂರು, ಜ.1- ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕದ ನಂತರ ತೀವ್ರ ಅಸಮಾಧಾನಗೊಂಡಿರುವ ನಾಯಕರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.
ಅಸಮಾಧಾನಗೊಂಡಿರುವ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ (Yatnal), ವಿ.ಸೋಮಣ್ಣ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಇವರೊಂದಿಗೆ ರಮೇಶ್ ಜಾರಕಿಹೊಳಿ,ರಾಮದಾಸ್, ಸಿ.ಟಿ.ರವಿ ಸೇರಿದಂತೆ ಇತರ ಕೆಲವು ನಾಯಕರು ಜನವರಿ 9 ರಂದು ದೆಹಲಿಗೆ ತೆರಳಲು ತೀರ್ಮಾನಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಮಾಜಿ ಸಚಿವ ವಿ. ಸೋಮಣ್ಣ ನನಗೆ ಪಕ್ಷದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಜನವರಿ 9 ಕ್ಕೆ ದೆಹಲಿಗೆ ತೆರಳುತ್ತಿದ್ದೇನೆ. ವರಿಷ್ಠರನ್ನು ಭೇಟಿ ಮಾಡುತ್ತೇನೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‌ನನ್ನು ಕೇಳುತ್ತೇನೆ ಎಂದರು.
ನನಗೆ ಅನ್ಯಾಯವಾಗಿದೆ. ನಾನೇ ಹೋಗಿ ನಾಲ್ಕೂವರೆ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದರೂ ನನಗೆ ಮಾಟ-ಮಂತ್ರ ಮಾಡಿಸಿದ್ದರೇನು ಗೊತ್ತಿಲ್ಲ. ಕ್ಷೇತ್ರ ಬಿಟ್ಟೆ ಎಂದರು.ನನಗೆ ಆಗಿರುವ ಅನ್ಯಾಯವನ್ನು ವರಿಷ್ಠರ ಬಳಿ ಹೇಳುತ್ತೇನೆ. ನನಗೆ ನೇರವಾಗಿ ತೊಂದರೆಯಾಗಿದೆ. ಈ ತೊಂದರೆಗೆ ಯಾರು ಕಾರಣವೋ ಅವರನ್ನು ಕೂರಿಸಿ ಮಾತುಕತೆ ನಡೆಸಿ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಈಗಾಗಲೇ ಕೇಳಿದ್ದೇನೆ. ಅವರನ್ನು ವರಿಷ್ಠರು ಕರೆಸಿ ಸೂಚನೆ ಕೊಡುತ್ತಾರೆ.
ನನ್ನ ಜೊತೆಗೆ ಯತ್ನಾಳ್ (Yatnal), ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಬರುತ್ತಿದ್ದಾರೆ ಎಲ್ಲರೂ ಕೂಡಿ ವರಿಷ್ಠರಿಗೆ ತಮಗಾಗಿರುವ ಅನ್ಯಾಯದ ಬಗ್ಗೆ ವಿವರಿಸುತ್ತೇವೆ.ಇದಾದ ನಂತರ ಅವರು ಎಲ್ಲವನ್ನೂ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ವಿವರಿಸಿದರು.