ಚಳ್ಳಕೆರೆ ಅ.12-ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ.ಹೀಗಾಗಿ ಅರಳೋಮರಳೋ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾನು ಅವರ ಮಟ್ಟಕ್ಕಿಳಿದು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಐಕ್ಯತಾ ಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಇಷ್ಟು ಕೀಳುಮಟ್ಟದಲ್ಲಿ ಮಾತನಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ರಾಯಚೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಒಬ್ಬ ಬಚ್ಚಾ ಎಂದು ಟೀಕಿಸಿದ್ದಲ್ಲದೆ, ಸಿದ್ದರಾಮಯ್ಯ ಪ್ರಧಾನಿ ಮೋದಿಯವರ ಪಾದಕ್ಕೂ ಸಮವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಮಟ್ಟಕ್ಕೆ ಇಳಿದು ಮಾತನಾಡುತ್ತಿಲ್ಲ. ನೆಹರು ಪಾದಕ್ಕೂ ಮೋದಿ ಸಮಾನವಲ್ಲ ಎಂದು ನಾನು ಹೇಳಲಾಗುತ್ತದೆಯೇ? ಏನೇ ಆದರೂ ಮೋದಿಯವರು ದೇಶದ ಪ್ರಧಾನಿ.
ಇನ್ನು ಯಡಿಯೂರಪ್ಪ ರಾಹುಲ್ ಗಾಂಧಿ ಪಾದಕ್ಕೂ ಸಮ ಎಂದು ನಾನು ಹೇಳೋಲ್ಲ. ಅದು ಕೀಳು ಅಭಿರುಚಿಯ ಮಾತಾಗುತ್ತದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹಾಗಾಗಿ ಅರಳುಮರಳಾಗಿರುವುದೇನೊ ಗೊತ್ತಿಲ್ಲ ಎಂದು ಹೇಳಿದರು.
Previous Article97ವರ್ಷದ ಮಹಾತೀರ್ ಮತ್ತೊಮ್ಮೆ ಮಲೇಷ್ಯಾದ ಸಂಸದರಾಗುತ್ತಾರಂತೆ
Next Article ಯಶಸ್ವಿನಿ ಯೋಜನೆ ಮರು ಜಾರಿ