ಬೆಂಗಳೂರು – ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಭಿನ್ನಮತ ಹಾಗೂ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ.ಇದರ ಜೊತೆಗೆ ಮೀಸಲಾತಿ ಸೇರಿದಂತೆ ಹಲವು ಕಾರಣದಿಂದ ಲಿಂಗಾಯತ ಸಮುದಾಯ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದೆ ಎಂಬ ವರದಿಗಳು ಹೈಕಮಾಂಡ್ ನಿದ್ದೆಗೆಡುವಂತೆ ಮಾಡಿದೆ.
ಕಳೆದ ಎರಡು ಅವಧಿಯಿಂದ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರೂ,ಉತ್ತರ ಪ್ರದೇಶ, ಗುಜರಾತ್ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ದಕ್ಷಿಣದ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಗೆಲ್ಲುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಸಜ್ಜುಗೊಳ್ಳಲು ಬಿಜೆಪಿ ಸಿದ್ದತೆ ನಡೆಸಿದೆ.
ಈ ಮಹತ್ವಾಕಾಂಕ್ಷೆಗೆ ಭಿನ್ನಮತ ಹಾಗೂ ಹಳೆ ಮೈಸೂರು ಪ್ರಾಂತ್ಯದ ಕೆಲವರು ಬಿಜೆಪಿ ತೊರೆಯಲು ಸಜ್ಜುಗೊಂಡಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಬಿಜೆಪಿ ಹೈಕಮಾಂಡ್ ಇದೀಗ ಯಡಿಯೂರಪ್ಪ ಅವರ ಮೊರೆ ಹೋಗಿದೆ.
ಪಕ್ಷದಿಂದ ಈಗಾಗಲೆ ಒಂದು ಕಾಲು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿರುವ ವಸತಿ ಸಚಿವ ಸೋಮಣ್ಣ, ತೋಟಗಾರಿಕೆ ಸಚಿವ ನಾರಾಯಣ ಗೌಡ ಸೇರಿದಂತೆ ಹಲವರೊಂದಿಗೆ ಚರ್ಚೆ ನಡೆಸುವಂತೆ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಇವರೊಂದಿಗೆ ಇನ್ನೂ ಹಲವರು ಪಕ್ಷ ತೊರೆಯಲಿದ್ದಾರೆ ಎಂಬ ಮಾಹಿತಿಯಿದ್ದು,ಇದನ್ನು ಅಮಿತ್ ಶಾ , ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದು, ಎಲ್ಲರೊಂದಿಗೆ ಮಾತುಕತೆ ನಡೆಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಿ,ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿ,ನಿಮ್ಮ ಮಾತನ್ನು ಪಕ್ಷ ಪಾಲಿಸಲಿದೆ ಎಂದು ಹೇಳಿದ್ದಾರೆನ್ನಲಾಗಿದೆ.
ಪಕ್ಷ ತಮ್ಮನ್ನು ಕಡೆಗಣಿಸಿದೆ ಎಂಬ ಅಭಿಪ್ರಾಯ ಮೂಡಿದೆ.ಅನಿವಾರ್ಯವಾದ ಕಾರಣದಿಂದಾಗಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬೇಕಾಯಿತು. ಆದರೆ ಪಕ್ಷದಲ್ಲಿ ಎಲ್ಲಾ ಗೌರವ ನೀಡಿದೆ.ನೀವೊಬ್ಬ ಉನ್ನತ ನಾಯಕ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಆದ್ಯತೆ ನೀಡಲಿದೆ ಹೀಗಾಗಿ ಸಕ್ರಿಯ ರಾಜಕೀಯ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು.ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ಪಕ್ಷ ನಿಮ್ಮ ಹಿರಿತನವನ್ನು ಸೂಕ್ತ ರೀತಿಯಲ್ಲಿ ಗೌರವಿಸಲಿದ್ದು,ಈ ಚುನಾವಣೆ ನಿಮ್ಮ ನಾಯಕತ್ವದಲ್ಲಿ ಎದುರಿಸುವ ಘೋಷಣೆ ಮಾಡಲಿದೆ ಎಂದು ಹೇಳಿದರೆನ್ನಲಾಗಿದೆ.
ಅಮಿತ್ ಶಾ ಅವರ ಮನವಿ ಹಿನ್ನೆಲೆಯಲ್ಲಿ ಅತ್ಯುತ್ಸಾಹದಿಂದ ಬೀಗುತ್ತಿರುವ ಯಡಿಯೂರಪ್ಪ ಇದೀಗ ಭಿನ್ನಮತ ಬಗೆಹರಿಸಲು ಮುಂದಾಗಿದ್ದಾರೆ. ಬೆಂಗಳೂರಿನ ನಾಯಕತ್ವದ ಕುರಿತು ಸಚಿವರಾದ ಸೋಮಣ್ಣ ಮತ್ತು ಅಶೋಕ ನಡುವಿನ ವೈಮನಸ್ಯಕ್ಕೆ ಮದ್ದು ಅರೆಯಲಿರುವ ಯಡಿಯೂರಪ್ಪ ನಂತರ ನಾರಾಯಣ ಗೌಡ,ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರರೊಂದಿಗೆ ಮಾತನಾಡಲಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಕಾಯೋ ತಂದೆ! #yediyurappa #bjp
Previous Articleಚನ್ನಗಿರಿಯಲ್ಲಿ ಸಾಮಾನ್ಯರ ಮನೇಲೂ ನಾಲ್ಕೈದು ಕೋಟಿ ಇರುತ್ತೆ!
Next Article Toilet ನಲ್ಲಿ ಧೂಮಪಾನ-ಮಹಿಳೆ ಬಂಧನ