ನವದೆಹಲಿ
ಅದಾನಿ ಸಮೂಹ ಸಂಸ್ಥೆ ( Adani Group) ಗಳ ಷೇರು ಹಗರಣದ ವಿರುದ್ಧ ಯುವ ಕಾಂಗ್ರೆಸ್ (Youth Congress ) ಕಾರ್ಯಕರ್ತರ ಆಕ್ರೋಶ ಸ್ಫೋಟಿಸಿದೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (Srinivas BV) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ (Jantar Mantar) ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್‌ಐಸಿ (LIC) ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾವಿರಾರು ಕೋಟಿಯನ್ನು ಅದಾನಿ ಸಮೂಹ ಸಂಸ್ಥೆಯಲ್ಲಿ ಷೇರುಗಳ ಮೂಲಕ ಹೂಡಿಕೆ ಮಾಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಕಾರ್ಯಕರ್ತರು ಸಂಸತ್ ಭವನದತ್ತ ಮೆರವಣಿಗೆಯಲ್ಲಿ ತೆರಳಲು ಮುಂದಾದರು. ‘ಅದಾನಿ ಸ್ಕ್ಯಾಮ್’ ಎಂಬ ಬರಹ ಹೊಂದಿದ ಫಲಕ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿಯವರ ಭಾವಚಿತ್ರಗಳೊಂದಿಗೆ ಮೆರವಣಿಗೆ ಹೊರಟ ಕಾರ್ಯಕರ್ತರಿಗೆ ಪೊಲೀಸರು ತಡೆಯೊಡ್ಡಿದರು.
ಪೊಲೀಸರ ತಡೆಗೋಡೆ ಉಲ್ಲಂಘಿಸಿ ಮುನ್ನುಗ್ಗಲು ಯತ್ನಿಸಿದ ಬಿ.ವಿ.ಶ್ರೀನಿವಾಸ್ ಸೇರಿದಂತೆ ಹಲವು ಕಾರ್ಯಕರ್ತರೊಂದಿಗೆ ಜಟಾಪಟಿಗಿಳಿದ ಪೊಲೀಸರು ಬಲವಂತವಾಗಿ ಅವರನ್ನು ಬಂಧಿಸಿದರು. ಈ ವೇಳೆ ಪೊಲೀಸರು ಅನುಚಿತವಾಗಿ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ.