ಬೆಂಗಳೂರು,ಮೇ.7-
ಅಕ್ಕನ ಮನೆಯಿಂದಲೇ ನಗದು ಸೇರಿ 65 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಖತರ್ನಾಕ್ ತಂಗಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಗ್ಗೆರೆಯ ಉಮಾ ಬಂಧಿತ ಆರೋಪಿಯಾಗಿದ್ದು, ಆಕೆಯಿಂದ ನಗದು ಸೇರಿ 51.90 ಲಕ್ಷ ಮೌಲ್ಯದ 46 ಚಿನ್ನದ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಗದೇವನಹಳ್ಳಿಯ ಆರ್.ಆರ್ ಲೇಔಟ್‍ನ ಸಿಮೆಂಟ್ ಹಾಗೂ ಕಬ್ಬಿಣದ ವ್ಯಾಪಾರವನ್ನು ಮಾಡಿಕೊಂಡಿದ್ದ ಕುನ್ನೆಗೌಡ ವರೊಂದಿಗೆ ಅವರ ಸಂಬಂಧಿಕರೊಬ್ಬರು ವ್ಯಾಪಾರದಲ್ಲಿ ಪಾಲುದಾರರಾಗಿರುತ್ತಾರೆ.
ಕಳೆದ ಏ.22 ರಂದು ಬೆಳಿಗ್ಗೆ ಅವರ ಕುಟುಂಬ ಸಮೇತರಾಗಿ ಅವರ ಸ್ವಂತ ಊರಿನಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವರ ಹಬ್ಬದ ಪ್ರಯುಕ್ತ ಊರಿಗೆ ಹೋಗಿರುತ್ತಾರೆ. ಊರಿಗೆ ಹೋಗುವ ಮುನ್ನ ಪತ್ನಿಯ ತಂಗಿ ಸುಮಾಗೆ ಮನೆಯ ಕೀಯನ್ನು ಕೊಟ್ಟು ರಾತ್ರಿ ಮಲಗಲು ತಿಳಿಸಿರುತ್ತಾರೆ.
ಅಂದಿನಿಂದ ಕುನ್ನೇಗೌಡರ ಮನೆಯಲ್ಲಿಯೇ ಸುಮಾ ಮಲಗುತ್ತಿದ್ದು,ಏ. 24 ರಂದು ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ಮಲಗಲು ಹೋದಾಗ ಬಿರುವಿನ ಬಾಗಿಲುಗಳು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಕಳ್ಳತನವಾಗಿರುವ ಕುನ್ನೇಗೌಡರಿಗೆ ತಿಳಿಸಿರುತ್ತಾರೆ.
ಕೂಡಲೇ ಕುನ್ನೇಗೌಡ ತನ್ನ ಸಂಸಾರದೊಂದಿಗೆ ಅದೇ ದಿನ ರಾತ್ರಿ 12-30ರ ವೇಳೆ ಮನೆಗೆ ಬಂದಿರುತ್ತಾರೆ. ಮನೆಯಲ್ಲಿನ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿನಿಂದ ಸುಮಾರು 182 ಗ್ರಾಂ ಚಿನ್ನದ ನಾಣ್ಯಗಳನ್ನು ಹಾಗೂ ಮಂಚದ ಕೆಳಗಿಟ್ಟಿದ್ದ 52 ಲಕ್ಷ ನಗದು ಕಳ್ಳತನವಾಗಿರುವುದು ಕಂಡುಬಂದಿದ್ದು,ತಕ್ಷಣವೇ ಕೆಂಗೇರಿ ಠಾಣೆಗೆ ಬಂದು ನಗದು, ಚಿನ್ನದ ನಾಣ್ಯಗಳು ಸೇರಿ 65 ಲಕ್ಷ ಮೌಲ್ಯ ಕಳುವಾಗಿರುತ್ತದೆಂದು ದೂರನ್ನು ಸಲ್ಲಿಸಿದ್ದು, ಪ್ರಕರಣ ದಾಖಲಾಗುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಅಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಕುನ್ನೇಗೌಡ ಅವರ ಪತ್ನಿ ಸಂಬಂಧಿಕರುಗಳ ವಿವರಗಳನ್ನು ಪಡೆದು, ಕಳ್ಳತನವಾದ ದಿನ ಸಂಬಂಧಿಕರು ಎಲ್ಲಿದ್ದರು ಎಂಬ ಬಗ್ಗೆ ತನಿಖೆ ಕೈಗೊಂಡಿರುತ್ತಾರೆ.
ಕುನ್ನೇಗೌಡ ಅವರ ನಾದಿನಿ (ಪತ್ನಿಯ ತಂಗಿ) ಲಗ್ಗೆರೆಯಲ್ಲಿ ವಾಸವಾಗಿದ್ದು, ಆಟೋ ಕನ್ಸೆಲ್‍ಟೆಂಟ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು,ಆಕೆ ಏ.22 ರಂದು ಅಕೆಯು ಮನೆಯಲ್ಲಿ ಇಲ್ಲದಿರುವುದು ಹಾಗೂ ಆಕೆಯ ಮೇಲೆ ಅನುಮಾನವನ್ನು ಹೆಚ್ಚಿಸಿದೆ.
ಕೂಡಲೇ ಆಕೆಯನ್ನು ಠಾಣೆಗೆ ಕರೆತಂದು ಸುದೀರ್ಘವಾಗಿ ವಿಚಾರಣೆ ನಡೆಸಿದಾಗ, ಅಕೆಯು ಏ.22ರಂದು ಅಕ್ಕನ ಮನೆಗೆ ಬಂದು, ತನ್ನಲಿರುವ ನಕಲಿ ಕೀ ಬಳಸಿ ಮನೆಯನ್ನು ಪ್ರವೇಶಿಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇಟ್ಟಿದ್ದ 52 ಲಕ್ಷ ನಗದು ಹಣವನ್ನು ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾಳೆ.
ಆಕೆಯನ್ನು ಬಂಧಿಸಿ ತನಿಖೆಯನ್ನು ಮುಂದುವರೆಸಿ, ಅರೋಪಿತಳು ವಾಸವಿರುವ ಮನೆಯಿಂದ 5 ಲಕ್ಷ ನಗದು ಹಣ ಮತ್ತು 30 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡು ಅಲ್ಲದೆ ಅಕೆಯು ಕೆಲಸ ಮಾಡುವ ಆಟೋ ಕನ್ಸೆಲ್‍ಟೆಂಟ್ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯಗಳು, ನಗದು 46.90 ಲಕ್ಷ ರೂ ಆಟೋ ಕನ್ಸೆಲ್‍ಟೆಂಟ್ ಮಾಲೀಕರಿಂದ ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್ ಮಾರ್ಗದರ್ಶನದಲ್ಲಿ ಕೆಂಗೇರಿ ಪೊಲೀಸ್ ಇನ್ಸ್ ಪೆಕ್ಟರ್ ಕೊಟ್ರೇಶಿ ಬಿ.ಎಂ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಹೇಳಿದರು.