ನವದೆಹಲಿ,ಫೆ.1-
ಸಂಸತ್ ನ Budget ಅಧಿವೇಶನದ ಮೊದಲ ದಿನವೇ ಅದಾನಿ ಹಗರಣ ಸ್ಪೋಟಗೊಂಡು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದು ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ Congress, DMK, TMC, ಸಮಾಜವಾದಿ, ಶಿವಸೇನೆ, JDU ಮತ್ತು ಎಡಪಕ್ಷಗಳ ಸದಸ್ಯರು ಅದಾನಿ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೋರಿದರು. ಷೇರು ಹಗರಣದ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆಗೆ ಆಗ್ರಹಿಸಿ ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು.
ಆದರೆ ಉಭಯ ಸದನಗಳ ಅಧ್ಯಕ್ಷರು ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಪ್ರತಿಪಕ್ಷಗಳು ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದವು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಇದರಿಂದ ಸುಗಮ ಕಲಾಪ ಸಾಧ್ಯವಾಗದೆ ಸಭಾದ್ಯಕ್ಷರು ಸದನವನ್ನು ಕೆಲಕಾಲ ಮುಂದೂಡಿದರು.