ಬೆಂಗಳೂರು,ಜ.8-
ಪರಿಶಿಷ್ಟ ಜಾತಿ ಮತ್ತು ವರ್ಗದ ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳ ಡಿನ್ನರ್ ಸಭೆಗೆ ಬ್ರೇಕ್ ಹಾಕಿದ ಹೈಕಮಾಂಡ್ ನಡೆಗೆ ಇದೀಗ ಕಾಂಗ್ರೆಸ್ಸಿನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಗೃಹ ಮಂತ್ರಿ ಪರಮೇಶ್ವರ್ ಲೋಕೋಪಯೋಗಿ ಮಂತ್ರಿ ಸತೀಶ ಜಾರಕಿಹೊಳಿ ಮತ್ತು ಸಹಕಾರ ಮಂತ್ರಿ ರಾಜಣ್ಣ ಹೈಕಮಾಂಡ್ ನಡೆಯ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ತಮ್ಮ ಸಮುದಾಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಗೃಹಮಂತ್ರಿ ಪರಮೇಶ್ವರ ಅವರು ಶಾಸಕರು ಮತ್ತು ಮಂತ್ರಿಗಳ ಸಭೆ ಆಯೋಜಿಸಿದ್ದರು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಆದರೂ ಈ ಸಭೆ ಯಾಕೆ ರದ್ದಾಯಿತು ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸಭೆಯಲ್ಲಿ ನಾವು ಮಾತನಾಡಿಕೊಳ್ಳುತ್ತೇವೆ ಊಟ ಮಾಡುತ್ತೇವೆ ಈ ಬಗ್ಗೆ ಡಿ.ಕೆ.ಶಿವಕುಮಾರ್ ಗಾಗಲೀ, ಬೇರೆ ಯಾರಿಗೇ ಆಗಲಿ ಆತಂಕ ಬೇಡ ಎಂದು ಹೇಳಿದರು.
ಸಭೆ ರದ್ದಾಗಿರುವ ಬಗ್ಗೆ ಬಗ್ಗೆ ಗೃಹ ಮಂತ್ರಿ ಪರಮೇಶ್ವರ್ ಅವರ ಕುರಿತಂತೆ ಮಾತುಕತೆ ನಡೆಸುತ್ತೇನೆ ಅವರಿಂದ ಮಾಹಿತಿ ಪಡೆದ ನಂತರ
ಮುಂದಿನ ದಿನಗಳಲ್ಲಿ ಸಭೆ ಸೇರುವ ಬಗ್ಗೆ ಹೈಕಮಾಂಡ್ ನಾಯಕರ ಮನವೊಲಿಸಲಾಗುವುದು. ರಾಜಕೀಯದಲ್ಲಿ ಹಿನ್ನಡೆ, ಮುನ್ನಡೆ ಸಹಜ. ಇಲ್ಲಿ ಸೋಲು-ಗೆಲುವು ಎಂಬುದನ್ನು ಪರಿಗಣಿಸಬೇಕಿಲ್ಲ. ಒಮೆ ನಾವು ಗೆಲ್ಲುತ್ತೇವೆ, ಇನ್ನೊಮೆ ಬೇರೆಯವರು ಗೆಲ್ಲುತ್ತಾರೆ. ರಾಜಕೀಯದಲ್ಲಿ ಈ ರೀತಿಯ ಮುಸುಕಿನ ಗುದ್ದಾಟಗಳು ಇದ್ದೇ ಇರುತ್ತವೆ ಎಂದು ಹೇಳಿದರು
ಮುಂದಿನ ದಿನಗಳಲ್ಲಿ ಗೃಹಸಚಿವರು ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಸಭೆಯ ದಿನಾಂಕ ನಿಗದಿ ಮಾಡಲಿದ್ದಾರೆ. ಸಭೆ ನಡೆಸಬಾರದು ಎಂದು ಯಾರೂ ಹೇಳಿಲ್ಲ. ಹೈಕಮಾಂಡ್ ಗಮನಕ್ಕೆ ಹೋಗಿರುವುದರಿಂದ ಅದರಲ್ಲೂ ಪರ-ವಿರೋಧ ಇರುವುದರಿಂದ ಹೈಕಮಾಂಡ್ ಅನುಮತಿ ಪಡೆದು ಸಭೆ ನಡೆಸಲಾಗುವುದು ಎಂದರು.
ಸುಮ್ಮನಿರೋಲ್ಲಾ:
ಗೃಹ ಮಂತ್ರಿ ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ತಾವು ಕರೆದಿದ್ದ ಸಭೆಯನ್ನು ರದ್ದುಗೊಳಿಸಿಲ್ಲ. ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಭೆಯನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮಗಿದೆ ಎಂದು ಸವಾಲು ಹಾಕಿದರು.
ಚಿತ್ರದುರ್ಗ ಸಮಾವೇಶದ ಹಿನ್ನೆಲೆಯಲ್ಲಿ ಸಮುದಾಯದ ಬಹಳಷ್ಟು ಬೇಡಿಕೆಗಳು ಈಡೇರಿವೆ. ಅವುಗಳ ಬಗ್ಗೆ ಚರ್ಚೆ ನಡೆಸಲು ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತಡರಾತ್ರಿ ಸಭೆ ನಿಗದಿಯಾಗಿದ್ದರಿಂದಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಇದು ರಾಜಕೀಯ ಪ್ರೇರಿತ ಅಲ್ಲ ಎಂದರು.
ಇದು ಆಂತರಿಕವಾದ ಸಭೆಯಾದ್ದರಿಂದ ಹೈಕಮಾಂಡ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಮಗೆ ಕರೆ ಮಾಡಿ ತಾವು ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದರು. ಸಭೆಗೆ ಬರುವಂತೆ ಅವರಿಗೆ ಕರೆ ನೀಡಲಾಯಿತು. ಆದರೆ ಸದ್ಯಕ್ಕೆ ಕಾಲಾವಕಾಶ ಇಲ್ಲ. ಹಾಗಾಗಿ ಸಭೆಯನ್ನು ಮುಂದೂಡಿ ಎಂದು ಸಲಹೆ ನೀಡಿದರು. ನಮ್ಮ ಸಭೆಗೆ ಹೈಕಮಾಂಡ್ ನಾಯಕರು ಭಾಗವಹಿಸುವುದಾದರೆ ಅದು ಇನ್ನೂ ಒಳ್ಳೆಯದು. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಸಮಯ ನೋಡಿಕೊಂಡು ಸಭೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.
ಸಭೆಯನ್ನು ನಿಲ್ಲಿಸಲು ಬೇರೆಯವರು ಪ್ರಭಾವ ಬೀರಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದ ಅವರು, ಒಂದು ವೇಳೆ ಗೊತ್ತಿದ್ದರೂ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಸಭೆ ನಡೆಸುವುದು ರಹಸ್ಯವೇನಲ್ಲ. ನಾವು ರಾಜಕಾರಣ ಮಾಡಬೇಕು ಎಂದಾದರೆ ಬಹಿರಂಗವಾಗಿಯೇ ಮಾಡುತ್ತೇವೆ. ನಾಲ್ಕು ಗೋಡೆ ಮಧ್ಯೆ ರಹಸ್ಯ ಸಭೆ ನಡೆಸುವ ಅಗತ್ಯ ನಮಗಿಲ್ಲ. ದಲಿತ ಸಮುದಾಯದಲ್ಲಿ ಅನೇಕ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪೇನೂ ಅಲ್ಲ ಎಂದು ತಿಳಿಸಿದರು.
ಕೆ.ಎನ್.ರಾಜಣ್ಣ ಕಿಡಿ:
ಗೃಹ ಮಂತ್ರಿ ಪರಮೇಶ್ವರ್ ಕರೆದಿದ್ದ ಔತಣಕೂಟ ರದ್ದುಗೊಂಡ ಕುರಿತು ಪ್ರತಿಕ್ರಿಯೆ ನೀಡಿರುವ ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಮುಖ್ಯಮಂತ್ರಿ ಮತ್ತು ಸಚಿವರ ಡಿನ್ನರ್ ಸಭೆಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಬೇಜಾರಾಗಿ, ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ಡಿ.ಕೆ.ಶಿವಕುಮಾರ್ ಬೇಜಾರಾಗಲು ಯಾರಾದರು ಅವರ ಆಸ್ತಿ ಬರೆಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ, ಪಂಗಡದ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದವರಿಗೆ ಹಾಸ್ಟೆಲ್ ಪ್ರವೇಶ ನೀಡುತ್ತಿಲ್ಲ. ಇಂತಹ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆ ಮಾಡಬೇಡಿ ಎಂದರೆ ಇವರು ಪರಿಶಿಷ್ಟ ಸಮುದಾಯದ ವಿರೋಧಿಗಳೇ? ಇದು ಬಹಳ ದಿನ ನಡೆಯುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕರೆದ ಸಭೆಗೆ ರಾಜಕೀಯ ಲೇಪನ ಕೊಟ್ಟು, ವಿರೋಧ ವ್ಯಕ್ತಪಡಿಸುವುದು ಪರಿಶಿಷ್ಟ ಸಮುದಾಯಗಳಿಗೆ ಮಾಡುವ ಅನ್ಯಾಯ ಎಂದು ಕಿಡಿಕಾರಿದರು.
Previous Articleಶಿವಕುಮಾರ್ ಸಹನೆಯಿಂದ ಸಹಿಸುತ್ತಿದ್ದಾರಂತೆ
Next Article ಹೀರಾ ಡೈಮಂಡ್ ಒಡತಿಯ ವಂಚನೆ