ಗೋವಿಂದ ನಾಮ ಸ್ಮರಣೆ ಮಾಡುತ್ತಾ ವೆಂಕಟೇಶ್ವರನ ದರ್ಶನಕ್ಕೆ ಮುಗಿಬಿದ್ದ ಸಾವಿರಾರು ಭಕ್ತರು ದೇವಾಲಯದತ್ತ ಧಾವಿಸಿದ ವೇಳೆ ಕಾಲ್ತುಳಿತ ಉಂಟಾಗಿ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರಲ್ಲಿ ಮೂರು ಜನರ ಸ್ಥಿತಿ ಗಂಭೀರವಾಗಿದ್ದು , ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ದೇವಾಲಯ ಸಮೀಪದ ಸರ್ವ ದರ್ಶನ ಕೌಂಟರ್ ಬಳಿ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಲ್ಲದೆ, ಕಾಲ್ತುಳಿತ ನಿಭಾಯಿಸುವಲ್ಲಿ ಯಶಸ್ವಿಯಾದರು.
ಸರಣಿ ರಜೆ ಹಾಗು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಬಂದಿದ್ದರು. ಇವರೆಲ್ಲಾ ಉಚಿತ ದರ್ಶನದ ಟಿಕೆಟ್ ಗಾಗಿ ಸರ್ವದರ್ಶನ ಕೌಂಟರ್ ಬಳಿ ಕಾಯುತ್ತಿದ್ದರು. ಹಲವು ಕಾರಣಗಳಿಂದಾಗಿ ಟಿಟಿಡಿ ಆಡಳಿತ ಮಂಡಳಿ ಎರಡು ದಿನಗಳಿಂದ ಟಿಕೆಟ್ ವಿತರಣೆ ಮಾಡಿರಲಿಲ್ಲ. ಹೀಗಾಗಿ ಟಿಕೆಟ್ ಗಾಗಿ ಕಾಯುತ್ತಿದ್ದವರ ಸಂಖ್ಯೆ ಹೆಚ್ಚುತ್ತಾ ಹೋಯಿತು.
ತಾಳ್ಮೆಯಿಂದ ಕಾಯುತ್ತಿದ್ದ ಇವರಿಗೆ ಇಂದೂ ಕೂಡಾ ಟಿಕೆಟ್ ನೀಡುವುದಿಲ್ಲ ಎಂಬ ಮಾಹಿತಿ ಬಂದು ಎಲ್ಲರೂ ಬ್ಯಾರಿಕೇಡ್ ಕಿತ್ತೆಸೆದು ದೇವರ ದರ್ಶನಕ್ಕೆ ಮುಂದಾದರು ಈ ವೇಳೆ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.