ಬೆಂಗಳೂರು, ಜೂ.3:
ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಆರು ಸ್ಥಾನಗಳ ಆಯ್ಕೆಗೆ ನಡೆದ ಮತದಾನ ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರ, ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಮತದಾನ ಬಿರುಸಿನಿಂದ ಆರಂಭವಾಯಿತು.
ಶಿಕ್ಷಕರು ಮತ್ತು ಪದವೀಧರ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸಿ ತಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿತ್ತಿದ್ದುದು ಕಂಡುಬಂದಿತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ ಆರಂಭವಾದ ಮತದಾನ ಸಂದರ್ಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಹೊತ್ತು ಕಳೆದಂತೆ ಮತದಾರರ ಸಂಖ್ಯೆ ಮತಗಟ್ಟೆಗೆ ಆಗಮಿಸುತ್ತಿದ್ದುದು ಹೆಚ್ಚಾಗಿದ್ದು ಕಂಡುಬಂದಿತು. ಉಳಿದಂತೆ ರಾಜ್ಯದ ಇತರೆ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.
ಮತಗಟ್ಟೆಯ ಹೊರಭಾಗದಲ್ಲಿ ತಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದೂ ಕೂಡ ಕಂಡುಬಂದಿತು.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಡಿ.ಶ್ರೀನಿವಾಸ್ ಅವರ ಪರವಾಗಿ ಬೆಂಬಲಿಗರು, ಕಾರ್ಯಕರ್ತರು ಮತದಾರರ ಮನವೊಲಿಸುತ್ತಿದ್ದುದು ಕಂಡುಬಂದಿತು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮತದಾನ ಮಾಡಿದರು.ಕನಕಪುರ ಮತಗಟ್ಟೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತದಾನ ಮಾಡಿದರು.
ಈಶಾನ್ಯ ಪದವೀಧರ,ಬೆಂಗಳೂರು ಪದವೀಧರ, ನೈರುತ್ಯ ಪದವೀಧರ ಹಾಗೂ ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ 6 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸೇರಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮತದಾರರು ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ.
6 ಕ್ಷೇತ್ರಗಳ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದರೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಹಣಾಹಣಿ ಏರ್ಪಟ್ಟಿದೆ.ಜೂನ್ 6 ರಂದು ಮತಗಳ ಎಣಿಕೆ ನಡೆಯಲಿದೆ.