ಬೆಂಗಳೂರು,ಜು.10:
ಮಹಿಳೆಯರೇ ಹುಷಾರ್… ರಸ್ತೆಯಲ್ಲಿ ಸಂಚರಿಸುತ್ತಿರುವ ನಿಮ್ಮ ಚಲನವಲನಗಳನ್ನು ರಹಸ್ಯವಾಗಿ ಮೊಬೈಲ್ ಕ್ಯಾಮೆರಾ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಅದರಲ್ಲೂ ಮಹಿಳೆಯರ ಖಾಸಗಿ ಅಂಗಾಂಗಗಳನ್ನು ಪ್ರಧಾನವಾಗಿ ಕಾಣುವಂತೆ ಚಿತ್ರಸಿ ಅವುಗಳನ್ನು ರೀಲ್ಸ್ ಮಾಡಿ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಮಹಿಳೆಯೊಬ್ಬರು ತಾವು ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಅಸಭ್ಯ ರೀತಿಯಲ್ಲೆ ರೀಲ್ಸ್ ಆಗಿ ಪರಿವರ್ತನೆಗೊಂಡು ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಅದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪಂಜಾಬ್‌ನ ಯುವಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್‌ನ ಅಮೃತಸರದ ನಿವಾಸಿ ಗುರುದೀಪ್ ಸಿಂಗ್ (26) ಬಂಧಿತ ಆರೋಪಿ. ಈತ ನಗರದ ಕೆ.ಆರ್‌ಪುರಂನಲ್ಲಿ ವಾಸವಾಗಿದ್ದುಕೊಂಡು ಹೋಟೆಲ್ ಮ್ಯಾನೇಜೆಂಟ್‌ನಲ್ಲಿ ಪದವಿ ಪಡೆದು ಉದ್ಯೋಗ ಹುಡುಕುತ್ತಿದ್ದ. ಇತ್ತೀಚೆಗೆ ಯುವತಿಯರ ಅಸಭ್ಯ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ
ರಾಜಧಾನಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಎಂ.ಜಿ. ರಸ್ತೆ, ಮತ್ತಿತರ ಪ್ರತಿಷ್ಠಿತ ಭಾಗಗಳಲ್ಲಿ ಮಹಿಳೆಯರು ನಡೆದುಕೊಂಡು ಹೋಗುವಾಗ ಅವರ ಒಪ್ಪಿಗೆಯಿಲ್ಲದೆ ಅಸಭ್ಯವಾಗಿ ಕಾಣುವಂತೆ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ
ಬೀದಿ ದೃಶ್ಯಗಳನ್ನು ಪ್ರದರ್ಶಿಸುವುದಾಗಿ ಹೇಳಿಕೊಂಡ ಖಾತೆಯು 10,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ. ಬೆಂಗಳೂರಿನ ಅವ್ಯವಸ್ಥೆಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಪ್ರದರ್ಶಿಸುವುದಾಗಿ ಹೇಳುತ್ತಿದ್ದ, ಆದರೆ, ವಾಸ್ತವವಾಗಿ ಈತ ಮಹಿಳೆಯರನ್ನು ಹಿಂಬಾಲಿಸಿ ರಹಸ್ಯವಾಗಿ ಅವರ ಖಾಸಗಿ ಅಂಗಾಂಗಳು ಅಸಭ್ಯವಾಗಿ ಕಾಣುವಂತೆ ಚಿತ್ರಸಿ ಪೋಸ್ಟ್ ಮಾಡುತ್ತಿದ್ದ.
ತಮ್ಮ ದೃಶ್ಯ ಈ ರೀತಿ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಮಹಿಳೆ ಅದನ್ನು ಪೊಲೀಸರ ಜಾಲತಾಣಕ್ಕೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಕಳವಳ:
ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಬೆಳವಣಿಗೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಜಾಲತಾಣ ಎಕ್ಸ್ ಖಾತೆಯಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿರುವ ಅವರು ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ ಎಂದಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜೊತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದಿದ್ದಾರೆ
ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ ನಮ್ಮ ಸಮಾಜ ಹೋಗುತ್ತಿದೆ ಎಂದಾದರೆ, ನಾಗರಿಕರಾಗಿ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ? ಎಂಬುದನ್ನು ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಇವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾದವು ಮಾತ್ರವಲ್ಲ, ಕಾನೂನಿನ ರೀತಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಕೂಡ ಹೌದು ಎಂದು ಹೇಳಿದ್ದಾರೆ
ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದನ್ನು ನಾಡಿನ ನನ್ನ ಎಲ್ಲಾ ತಾಯಂದಿರಿಗೆ, ಅಕ್ಕತಂಗಿಯರಿಗೆ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ
ಯಾರೇ ಆಗಲಿ ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೋಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ, ತಕ್ಷಣವೇ ಸೈಬರ್ ಸೆಲ್‌ನ ದೂರವಾಣಿ ಸಂಖ್ಯೆ: 1930ಗೆ ಕರೆಮಾಡಿ ಅಥವಾ ವೆಬ್‌ಸೈಟ್: cybercrime.gov.in ನಲ್ಲಿ ದೂರು ದಾಖಲಿಸಿ ಎಂದು ಹೇಳಿದ್ದಾರೆ
ನಾವು ನೀವೆಲ್ಲರೂ ಜೊತೆಗೂಡಿ ಪ್ರತಿ ಮಹಿಳೆಯೂ ಸುರಕ್ಷಿತವಾಗಿ, ಗೌರವದಿಂದ ಮತ್ತು ಸ್ವಾತಂತ್ರ್ಯದಿಂದ ಬದುಕುವ ಶ್ರೇಷ್ಠ ಕರ್ನಾಟಕವನ್ನು ನಿರ್ಮಿಸೋಣ ಎಂದು ಕರೆ ನೀಡಿದ್ದಾರೆ.
Previous Articleಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?
Next Article ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?