ಬೆಂಗಳೂರು,ಡಿ.25-
ಬೆಂಗಳೂರಿನ ಲಕ್ಷ್ಮಿದೇವಿ ನಗರದಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ನಡೆದಿದೆ. ಈ ಸಂಬಂಧ ಮೂವರು ಕಿಡಿಗೇಡಿಗಳನ್ನು ಬಂಧಿಸಲಾಗಿದೆ.
ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರನ್ನು ಶಾಸಕಿಯಾಗಿಸಬೇಕು ಎಂಬ ಕಾರಣಕ್ಕೆ ಮೊಟ್ಟೆಯಲ್ಲಿ ಆಸಿಡ್ ತುಂಬಿ ಈ ದಾಳಿ ನಡೆಸಲಾಗಿದೆ ಎಂದು ಮುನಿರತ್ನ ಆಪಾದಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿ ದೇವಿ ನಗರದಲ್ಲಿ ಏರ್ಪಡಿಸಿದ್ದ
ಮಾಜಿ ಪ್ರಧಾನಿ ದಿವಂಗತ ವಾಜಪೇಯಿಯವರ 100 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುನಿರತ್ನ ಪಕ್ಷದ ಕಾರ್ಯಕರ್ತರು ಮತ್ತುಅಭಿಮಾನಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಶಾಸಕ ಮುನಿರತ್ನ ಅವರ ತಲೆ ಮೇಲೆ ಏಕಾಎಕಿ ಮೊಟ್ಟೆ ದಾಳಿ ನಡೆದಿದೆ,ಕೊಡಲೇ ಭದ್ರತೆಗಿದ್ದ ಪೊಲೀಸರು ಸುತ್ತುವರೆದು ಅವರನ್ನು ವಾಹನದ ಬಳಿ ಕರೆದುಕೊಂಡು ಹೋಗಿದ್ದಾರೆ.ಅಲ್ಲಿದ್ದ ಅವರ ಕಾರಿನ ಗಾಜಿನ ಮೇಲೆಯೇ ಕಲ್ಲು ಬಿದ್ದಿದೆ.
ಪೊಲೀಸರು ತಕ್ಷಣವೇ ಮಧ್ಯ ಪ್ರವೇಶಿಸಿ ಅಲ್ಲಿ ಗುಂಪು ಸೇರಿದವರನ್ನು ಚದುರಿಸಿ ಮುನಿರತ್ನ ಅವರನ್ನು ಸುರಕ್ಷಿತವಾಗಿ ಕರೆದೊಯ್ದರು.
ತಮ್ಮ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಮಾಜಿ ಸಂಸದ ಡಿಕೆ ಸುರೇಶ್, ಡಿಸಿಎಂ ಡಿಕೆ ಶಿವಕುಮಾರ್ ಕಡೆಯವರಿಂದ ನನ್ನ ಮೇಲೆ ಆಸೀಡ್ ದಾಳಿ ನಡೆದಿದೆ ಎಂದು ಆರೋಪಿಸಿದರು.
ಮೊಟ್ಟೆಯ ಒಳಗಡೆ ಆಸಿಡ್ ಹಾಕಿ ದಾಳಿ ಮಾಡಿದ್ದಾರೆ. ಗುಂಪು ದಾಳಿ ಮಾಡಿ ನನ್ನ ಕೊಲೆ ಮಾಡಲು ಮುಂದಾಗಿದ್ದಾರೆ. ಡಿಕೆ ಸುರೇಶ್ ಅವರಿಗೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಬೇಕು ಎಂಬ ಆಸೆಯಿರುವುದರಿಂದ ನನ್ನ ಮೇಲೆ ದಾಳಿ ನಡೆದಿದೆ ಎಂದು ದೂರಿದರು.
ಮೂವರು ಬಂಧನ:
ಘಟನೆಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೊಟ್ಟೆ ದಾಳಿ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿ ಯಾವ ಕಾರಣಕ್ಕೆ ಯಾರು ಎನ್ನುವುದರ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Previous Articleಭಟ್ಕಳ ಉಗ್ರರಿಗೆ ಜೈಲು ಶಿಕ್ಷೆ.
Next Article ಸಿಟಿ ರವಿಯ ಕೊಳಕು ತೊಳೆಯಲು ಸಾಧ್ಯವಿಲ್ಲವಂತೆ.