ಬೆಂಗಳೂರು, ಮೇ.21:
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ
ರಾಜ್ಯ ಸರ್ಕಾರ ಒಂದು ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ದೇಶಾದ್ಯಂತ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಅಲೆ ಬೀಸುತ್ತಿದ್ದು ಇದರಲ್ಲಿ ಎನ್ ಡಿಎ ಮೈತ್ರಿಕೂಟ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.
ಇಂಡಿಯಾ ಮೈತ್ರಿಕೂಟದ ಲೇವಡಿ ಮಾಡುವ ಪ್ರಧಾನಿಯವರು ಎನ್‌ಡಿಎ ಮೈತ್ರಿಕೂಟ ಮಾಡಿಕೊಂಡಿದ್ದೇಕೆ? ಗೆಲ್ಲುವ ವಿಶ್ವಾಸವಿದ್ದಿದ್ದರೆ ಏಕಾಂಗಿಯಾಗಿಯೇ ಸ್ಪರ್ಧಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಅಪಪ್ರಚಾರದಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಆರ್ಥಿಕವಾಗಿ ಸಬಲವಾಗಿರುವುದಕ್ಕಾಗಿಯೇ ಪಂಚಖಾತ್ರಿಗಳು ಮತ್ತು ಯೋಜನಾ ವೆಚ್ಚಗಳನ್ನು ಹಿಂದಿನ ಸರ್ಕಾರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆ ಮುಗಿದ ನಂತರವೂ ಪಂಚ ಖಾತ್ರಿ ಯೋಜನೆಗಳು ಮುಂದುವರೆಯುತ್ತವೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಈ ವಿಷಯವಾಗಿ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದು ಇದನ್ನು ಯಾರು ನಂಬಬಾರದು ಎಂದು ಮನವಿ ಮಾಡಿದರು.
ತಮ್ಮ ಸರ್ಕಾರದ ಒಂದು ವರ್ಷದ ಸರ್ಕಾರದ ಸಾಧನೆಯೆಂದರೆ ತಕ್ಷಣವೇ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ 2023-24 ರಲ್ಲಿ 36 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು
ಶಕ್ತಿ ಯೋಜನೆಯಡಿ 201 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 4.10 ಕೋಟಿ ಫಲಾನುಭವಿಗಳಿಗೆ 5,754 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ಗಾಗಿ 7,436 ಕೋಟಿ ರೂ. ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.20 ಕೊಟಿ ಯಜಮಾನಿಯರಿಗೆ 20,293 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದ್ದು, ಯುವನಿಧಿಯಡಿ 1,57,255 ನೋಂದಣಿಯಾಗಿದ್ದಾರೆ ಎಂದು ವಿವರಿಸಿದರು.
ಪಂಚಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದರ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ 54 ಸಾವಿರ ಕೋಟಿ ರೂ.ಗಳ ಬಂಡವಾಳ ವೆಚ್ಚದ ಬದಲಾಗಿ 56 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ನೀರಾವರಿಗೆ 14,369 ಕೋಟಿ ರೂ.ಗಳ ಬದಲಾಗಿ 18,198 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಶೇ.99.20 ಯಷ್ಟು ಅನುದಾನ ಬಳಕೆಯಾಗಿದೆ ಎಂದು ತಿಳಿಸಿದರು.
ಪರಿಶಿಷ್ಟರ ಬಗ್ಗೆ ಕಾಳಜಿ ವಹಿಸುವ ಪ್ರಧಾನಮಂತ್ರಿಯವರು ದೇಶಾದ್ಯಂತ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಎಸ್‌ಇಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ಏಕೆ ಜಾರಿಗೊಳಿಸಲಿಲ್ಲ? ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಪ್ರಧಾನಿಯವರು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಹಿಂದಿನ ಬೊಮಾಯಿ ಅವರ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್‌ನ ವಿಚಾರಣೆ ವೇಳೆ ಯಥಾಸ್ಥಿತಿಯನ್ನು ಮುಂದುವರೆಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದೆ. ಈವರೆಗೂ ಅದೇ ವ್ಯವಸ್ಥೆ ಮುಂದುವರೆದಿದೆ ಎಂದರು.