ಬೆಂಗಳೂರು,ಆ.1:
ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿರುವ ಮನವಿಗೆ ರಾಜ್ಯಪಾಲರು ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ಮಾಡಲು ಸಂಪುಟ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.
ನೈತಿಕತೆಯ ನೆಪವೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಿಂದ ದೂರ ಉಳಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಡಾ ಹಗರಣ ಕುರಿತಂತೆ ಉಂಟಾಗಿರುವ ಬೆಳವಣಿಗೆಯಲ್ಲಿ ಇಡೀ ಸಂಪುಟ ಒಮ್ಮತದೊಂದಿಗೆ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಲ್ಲಬೇಕು ಎಂದು ತೀರ್ಮಾನಿಸಲಾಯಿತು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಹಾಗೂ ಹಲವು ಮಂದಿ ಸಚಿವರು ರಾಜ್ಯಪಾಲರ ನಡೆಯನ್ನು ಬಲವಾಗಿ ಖಂಡಿಸಿದರು.
ಖಾಸಗಿ ದೂರು ಸಲ್ಲಿಸಲು ಅನುಮತಿ ಕೋರುವ ಪತ್ರಕ್ಕೆ ಸ್ಪಷ್ಟನೆ ಕೇಳಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತವಾಗಿದೆ ಈ ಹಿನ್ನೆಲೆಯಲ್ಲಿ ಆ ಪತ್ರವನ್ನು ರಾಜ್ಯಪಾಲರು ವಾಪಸ್ ಪಡೆಯಬೇಕು ಜೊತೆಗೆ ಖಾಸಗಿ ದೂರು ಸಲ್ಲಿಸಲು ಕೋರಿ ಸಲ್ಲಿಸಿರುವ ಅನುಮತಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು .
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯ ಕ್ರಮದ ಬಗ್ಗೆ ಜುಲೈ ಐದರಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತದೆ ಮರುದಿನವೇ ರಾಜ್ಯಪಾಲರು ಈ ಬಗ್ಗೆ ಸ್ಪಷ್ಟನೆ ಕೋರುತ್ತಾರೆ ಅದಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲ ವಿವರಣೆ ನೀಡಿದ್ದಾರೆ ಇದಾದ ನಂತರ ಜುಲೈ 15ರಂದು ರೈತ ಸಂಘಟನೆಗಳ ಒಕ್ಕೂಟ ರಾಜ್ಯಪಾಲರಿಗೆ ಈ ಬಗ್ಗೆ ಮನವಿ ಸಲ್ಲಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ ಈ ಪತ್ರವನ್ನು ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿದ್ದಾರೆ.
ಮುಖ್ಯಮಂತ್ರಿಗಳು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ನಿವೇಶನ ಹಂಚಿಕೆ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದಾರೆ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.
ಇದಾದ ನಂತರ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಎಂಬುವರು ಜುಲೈ 26ರಂದು ರಾಜ್ಯಪಾಲರಿಗೆ ಮನವಿಯೊಂದನ್ನು ಸಲ್ಲಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಅನ್ವಯ ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.
ಆ ದಿನವೇ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರನ್ನು ಭೇಟಿ ಮಾಡಿ ಸುಧೀರ್ಘವಾದ ವಿವರಗಳ ದಾಖಲೆ ನೀಡಿದ್ದಾರೆ ಇದನ್ನು ಪರಿಶೀಲಿಸದೆ ರಾಜ್ಯಪಾಲರು ಇದೀಗ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡುವ ಮೂಲಕ ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದರು.
ರಾಜ್ಯಪಾಲರ ನಿರ್ಧಾರ ಪೂರ್ವ ನಿಯೋಜಿತ ಕ್ರಮವಾಗಿದೆ ಹೀಗಾಗಿ ಇದರ ವಿರುದ್ಧ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಹೇಳಿದರು.
ರಾಜಕೀಯ ಕಾರಣಕ್ಕಾಗಿ ಈ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ ವರ್ಚಸ್ಸು ಮತ್ತು ಸರ್ಕಾರಕ್ಕೆ ಕಳಂಕ ತರುವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಇದನ್ನು ಗಟ್ಟಿಯಾದ ದ್ವನಿಯಲ್ಲಿ ಎದುರಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಶಿವಕುಮಾರ್ ಮಂತ್ರಿಗಳಾದ ಪರಮೇಶ್ವರ್, ಎಚ್ ಕೆ ಪಾಟೀಲ್, ಕೆಜೆ ಜಾರ್ಜ್, ಎಂಬಿ ಪಾಟೀಲ್
ಉಪಾಹಾರ ಸಭೆ:
ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಉಪಹಾರ ಸಭೆ ನಡೆಯಿತು ಇದರಲ್ಲಿ ಎಲ್ಲ ಮಂತ್ರಿಗಳು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಭಾಗವಹಿಸಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ಮುಖ್ಯಮಂತ್ರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೋಟಿಸ್ ನೀಡಿರುವ ಬಗ್ಗೆ ಈ ವೇಳೆ ಅನೌಪಚಾರಿಕವಾಗಿ ಚರ್ಚೆ ನಡೆಯಿತು.
ಈ ಸಭೆಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಆ ವಿಷಯ ಕುರಿತಂತೆ ಚರ್ಚಾ ನಡೆಸಲು ಕರೆದಿರುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವುದು ನೈತಿಕವಾಗಿ ಸರಿಯಾದ ಕ್ರಮಬವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಂದು ವೇಳೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಿದ್ದೆ ಆದಲ್ಲಿ ಅದರ ವಿರುದ್ಧ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಇಂತಹ ಪ್ರಸಂಗ ಉದ್ಭವಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಪಾಲ್ಗೊಂಡ ವಿಷಯ ಕಾನೂನಿನ ವೈರುದ್ಯೇಕ್ಕೆ ಕಾರಣವಾಗಲಿದೆ ಎಂದು ಅಡ್ವೋಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರು ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಸಿಎಂ ಪಂಪುಟ ಸಭೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡರು ಸಿಎಂ ಅವರ ಬದಲಿಗೆ ಉಪಮುಖ್ಯಮಂತ್ರಿಗಳು ಸಂಪುಟ ಸಭೆಯ ನೇತೃತ್ವ ವಹಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ
ಈ ಸಭೆಯ ಬಳಿಕ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮುಡಾ ವಿಚಾರದಲ್ಗಿ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿ ನೀಡಿದ್ದಾರೆ. ವೈಯಕ್ತಿಕವಾಗಿ ದಾಖಲೆಗಳನ್ನೂ ಕೊಟ್ಟಿದ್ದಾರೆ. ಆದರೂ ಅವರು ನೋಟಿಸ್ ಕೊಟ್ಟಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ, ಸ್ಪಷ್ಟನೆ ಕೇಳದೆ ರಾಜ್ಯಪಾಲರು ನೋಟಿಸ್ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರು ಹೇಗೆ ವರ್ತಿಸಬೇಕು, ರಾಜ್ಯ ಸರ್ಕಾರದ ಜೊತೆ ಅವರ ಸಂಬಂಧ ಹೇಗಿರಬೇಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ ಹೇಳಿದೆ. ಅದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆಂದರೆ, ಸ್ಕ್ರಿಪ್ಟ್ ಯಾರು ಬರೆದು ಕೊಡುತ್ತಿದ್ದಾರೆ ಎನ್ನುವುದನ್ನೂ ನೋಡಬೇಕು’ ಎಂದರು.